ನಾಳೆ ಏನಾಗಬಹುದು ಅಲ್ಲಿ..!? ಎಂಬ ಕುತೂಹಲ ಹುಟ್ಟಿಸಿದೆ ಕೃಷ್ಣ ಜನ್ಮಭೂಮಿ; ಪೂರಕವೆಂಬಂತೆ ಟ್ರೆಂಡಿಂಗ್​ನಲ್ಲಿ ಮಥುರಾ!

Mathura
Published on

ನವದೆಹಲಿ: ಡಿಸೆಂಬರ್ 6ನೇ ತಾರೀಕು ಅಯೋಧ್ಯಾ ರಾಮಜನ್ಮಭೂಮಿಯನ್ನು ನೆನಪಿಸುವಂಥ ದಿನ. ಇದೀಗ ಅದೇ ದಿನದಂದು ಮಥುರಾ ಕೃಷ್ಣ ಜನ್ಮಭೂಮಿ ಕೂಡ ಸುದ್ದಿಯಲ್ಲಿದ್ದು, ನಾಳೆ ಅಲ್ಲೇನಾಗಬಹುದು ಎಂಬ ಕುತೂಹಲ ಮೂಡಿದೆ. ಅದಕ್ಕೆ ಪೂರಕವೆಂಬಂತೆ ಟ್ವಿಟರ್​ನಲ್ಲಿ ಮಥುರಾ ಟ್ರೆಂಡಿಂಗ್​ನಲ್ಲಿತ್ತು.

ರಾಮಜನ್ಮಭೂಮಿ ವಿವಾದ ಕೊನೆಗೂ ಬಗೆಹರಿದಿದ್ದು, ಅಲ್ಲಿ ಈಗಾಗಲೇ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಕೂಡ ಸಿಕ್ಕಿದೆ. ಇದೀಗ ಕೃಷ್ಣ ಜನ್ಮಭೂಮಿಯಲ್ಲಿ ಕೂಡ ಮಸೀದಿ ಇದ್ದು, ಅಲ್ಲಿಯೂ ಭವ್ಯ ಕೃಷ್ಣಮಂದಿರವಾಗಬೇಕು ಎಂಬ ಕೂಗೆದ್ದಿದೆ.

ಮತ್ತೊಂದೆಡೆ ಅಖಿಲ ಭಾರತ ಹಿಂದೂ ಮಹಾಸಭಾದವರು ನಾಳೆ ಅಂದರೆ ಡಿ. 6ರಂದು ಮಥುರಾದ ಶಾಹಿ ಈದ್ಗಾ ಪ್ರದೇಶದಲ್ಲಿ ಕೃಷ್ಣನ ಮೂರ್ತಿಯನ್ನು ಇಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಥುರಾ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಬಿಗಿ ಬಂದೋಬಸ್ತ್ ಕೂಡ ಕೈಗೊಳ್ಳಲಾಗಿದೆ.

ಇನ್ನು ಈ ಕುರಿತಂತೆ ಪರ-ವಿರೋಧ ಮಾತುಕತೆಗಳು ನಡೆಯುತ್ತಿದ್ದು, ನಾಳೆ ಅಲ್ಲಿ ಏನಾಗಬಹುದೋ ಎಂಬ ಕುತೂಹಲವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಕೃಷ್ಣಜನ್ಮಭೂಮಿ ಕುರಿತ ಚರ್ಚೆ ವ್ಯಾಪಕವಾಗಿ ನಡೆಯುತ್ತಿರುವುದರಿಂದ ಟ್ವಿಟರ್​ನಲ್ಲಿ ಮಥುರಾ ಟ್ರೆಂಡಿಂಗ್​ನಲ್ಲಿದ್ದು, ವಿಷಯದ ತೀವ್ರತೆಯನ್ನು ಸೂಚಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net