

ಬೆಂಗಳೂರು: ಬಾಣಂತಿಯರ ಸಾವಿನ(maternal death) ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು, ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್(R Ashok) ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಾಣಂತಿಯರ ಮರಣ ಮೃದಂಗ ಇನ್ನೂ ನಿಂತಿಲ್ಲ. ಒಟ್ಟು 736 ತಾಯಂದಿರು ಮೃತಪಟ್ಟಿದ್ದಾರೆ. ಇದು ಸರ್ಕಾರದ ಪ್ರಾಯೋಜಿತ ಕೊಲೆಯಾಗಿದ್ದು ಸರ್ಕಾರವೇ ನೇರ ಹೊಣೆಯಾಗಿದೆ. ಹುಬ್ಬಳ್ಳಿಯಲ್ಲಿ ಬಾಣಂತಿ ಸತ್ತಿದ್ದಕ್ಕೆ ಅವರ ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಿಪಟೂರಿನಲ್ಲೂ ಒಬ್ಬ ಬಾಣಂತಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಪೂರೈಸಿದ ಐವಿ ದ್ರಾವಣದಿಂದಾಗಿ ಬಾಣಂತಿಯರು ಮೃತರಾಗುತ್ತಿದ್ದಾರೆ. ಕಾಂಗ್ರೆಸ್‌ನ ಸಮಾವೇಶ ನಡೆದಾಗಲೇ ಬಾಣಂತಿಯರು ಮೃತಪಟ್ಟಿದ್ದರೂ ಅಲ್ಲಿಗೆ ಹಿರಿಯ ನಾಯಕರು ಭೇಟಿ ನೀಡಿಲ್ಲ ಎಂದು ದೂರಿದರು.
ಕಾಂಗ್ರೆಸ್ ನಾಯಕರು ಮಹಿಳೆಯರಿಗೆ 2 ಸಾವಿರ ರೂ.ನೀಡುವ ಬದಲು, ಬಾಣಂತಿಯರ ಬದುಕಿಗೆ ಗ್ಯಾರಂಟಿ ನೀಡಿದರೆ ಸಾಕು ಎಂದು ಲೇವಡಿ ಮಾಡಿದರು.
ಕಳಪೆ ಔಷಧ ಪೂರೈಸಿದ ವಿಚಾರದಲ್ಲಿ ಡ್ರಗ್ ಕಂಟ್ರೋಲರ್ ಮಾಡಿದ ತಪ್ಪುಗಳ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ನೋಟಿಸ್ ನೀಡಿದ್ದಾರೆ. ಆದರೆ ಅಧಿವೇಶನದಲ್ಲಿ ಮಾತ್ರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಲ್ಲ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ ಎಂದರು.
ಡೆತ್ ಆಡಿಟ್ ಬಗ್ಗೆ ಸರ್ಕಾರ ಹೇಳಿದ್ದರೂ ಈವರೆಗೆ ಆ ವರದಿ ಬಂದಿಲ್ಲ. ಅಧಿವೇಶನದಲ್ಲಿ ನುಣುಚಿಕೊಳ್ಳಲು ಸರ್ಕಾರ ಉತ್ತರ ನೀಡಿದೆಯೇ ಹೊರತು ಯಾವುದೇ ಕಠಿಣ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐವಿ ದ್ರಾವಣವನ್ನು ರಾಜ್ಯ ಸರ್ಕಾರ ಪೂರೈಸುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ರಾಜ್ಯ ಸರ್ಕಾರ ಔಷಧವನ್ನು ಪರೀಕ್ಷಿಸಬೇಕು. ಬೇರೆ ರಾಜ್ಯಗಳಲ್ಲಿ ಎಲ್ಲೂ ಈ ಸಾವುಗಳು ಕಂಡುಬಂದಿಲ್ಲ. ಕರ್ನಾಟಕದಲ್ಲಿ ಮಾತ್ರ ಈ ಘಟನೆಗಳು ನಡೆಯುತ್ತಿದೆ. 462 ಔಷಧಗಳು ಕಳಪೆ ಎಂದು ಸರ್ಕಾರವೇ ಹೇಳಿದೆ. ಆದರೂ ಇದೇ ಔಷಧಗಳನ್ನು ಆಸ್ಪತ್ರೆಗೆ ಪೂರೈಸಲಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.
ಒಂದು ವರ್ಷದಲ್ಲಿ ಬಿಜೆಪಿ ಬಹಳಷ್ಟು ಹೋರಾಟ ಮಾಡಿದ್ದೇವೆ. ಎಲ್ಲ ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗಿದೆ. ಬಾಣಂತಿಯರ ಸಾವಿನ ವಿರುದ್ಧದ ಹೋರಾಟವನ್ನು ನಿಲ್ಲಿಸಲ್ಲ ಎಂದು ಗುಡುಗಿದರು.