ಬಾಣಂತಿಯರ ಸಾವು, ಡ್ರಗ್ ಪೂರೈಕೆ ಕಂಪನಿ ವಿರುದ್ಧ ಮೊಕದ್ದಮೆ|Ballary maternal-death-lawsuit-against-drug-supply-company

ball
Published on

ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯಲೋಪಕ್ಕಾಗಿ ಡ್ರಗ್ ಕಂಟ್ರೋಲರ್ ಉಮೇಶ್ ಅವರನ್ನು ಅಮಾನತು(Suspension of Drug Controller Umesh) ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)ತಿಳಿಸಿದರು.

ಆಸ್ಪತ್ರೆಯಲ್ಲಿ ಇತ್ತೀಚೆಗೆ ಸಂಭವಿಸಿದ ಸಾವಿನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಸಭೆಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.

ರಿಂಗರ್ ಲ್ಯಾಕ್ಟೇಟ್ ದ್ರಾವಣ ಪೂರೈಸಿರುವ ಪಶ್ಚಿಮ ಬಂಗಾ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ(Criminal Case) ದಾಖಲಿಸಲು ಆದೇಶಿಸಲಾಗಿದೆ. ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸರ್ಕಾರದಿಂದ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಡ್ರಗ್ ಪೂರೈಸಿದ ಕಂಪನಿಯಿಂದಲೂ ಪರಿಹಾರ ವಸೂಲು ಮಾಡಿ, ಮೃತರ ಕುಟುಂಬಕ್ಕೆ ನೀಡಲು ಸೂಚನೆ ನೀಡಲಾಗಿದೆ ಎಂದರು. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಈ ರೀತಿಯ ಸಾವಿನ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಅಧಿಕಾರಿಗಳಿಗೆ ಸಿಎಂ ತಾಕೀತು

ಇನ್ನು ಮುಂದೆ ಈ ರೀತಿಯ ದುರ್ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಪ್ರಯೋಗಾಲಯದ ವರದಿ ಬಳಿಕ ಘಟನೆಗೆ ಜವಾಬ್ದಾರರಾದ ಪ್ರತಿಯೊಬ್ಬರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಔಷಧ ನಿಯಂತ್ರಣ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಉಲ್ಲೇಖಿತ ಡ್ರಗ್‌ನಿಂದ ರಾಜ್ಯದ ಇತರೆಡೆಗಳಲ್ಲಿ ಸಮಸ್ಯೆ ಆಗಿದೆಯೇ ಎನ್ನುವ ಬಗ್ಗೆ ತಕ್ಷಣ ವರದಿ ತರಿಸಿಕೊಳ್ಳಲು ಖಡಕ್ ಸೂಚನೆ ನೀಡಿದರು.

ಕೇಂದ್ರಕ್ಕೆ ಪತ್ರ ಬರೆಯಲು ತೀರ್ಮಾನ

ಮೆಡಿಸಿನ್ ಮಾಫಿಯಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುವುದು ಹಾಗೂ ತಮಿಳುನಾಡು ಮಾದರಿಯಲ್ಲಿ ಔಷಧ ಪೂರೈಕೆ ನಿಯಂತ್ರಣಕ್ಕೆ ಹೊಸ ರೂಪುರೇಷೆ, ನಿಯಮ ರಚಿಸುವ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಹಲವು ರೀತಿಯ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಸಿದ್ದರಾಮಯ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯ ಮುಖ್ಯಾಂಶಗಳು

*ನವೆಂಬರ್ 11ರಿಂದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರ ಸಾವಿನ ಪ್ರಕರಣ ವರದಿಯಾಗಿದೆ. ಹಿಮೋಡಯಾಲಿಸಿಸ್ ಮತ್ತು ಬಹು ಅಂಗಗಳ ವೈಫಲ್ಯ ಹಾಗೂ ತೀವ್ರತರ ಮೂತ್ರಪಿಂಡದ ಗಾಯದಂತಹ ತೊಂದರೆಗಳ 7 ಪ್ರಕರಣಗಳಲ್ಲಿ, 4 ಬಾಣಂತಿಯರು ಸಾವಿಗೀಡಾಗಿದ್ದಾರೆ. ಉಳಿದ 3 ರೋಗಿಗಳಲ್ಲಿ 2 ಮಂದಿ ಬಿಡುಗಡೆಯಾಗಿ ಬಳ್ಳಾರಿ ವಿಮ್ಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

*ಬಾಣಂತಿಯರ ಸಾವಿನ ಕುರಿತು ತಜ್ಞರ ಸಮಿತಿ ರಚಿಸಿ ಘಟನಾವಳಿಗಳ ಬಗ್ಗೆ ಪ್ರಾಥಮಿಕ ವರದಿ ಪಡೆಯಲಾಗಿದೆ.

* ಬಾಣಂತಿಯರಿಗೆ ನೀಡಲಾಗಿರುವ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಎಲ್ಲ ಬ್ಯಾಚ್‌ಗಳ ಬಳಕೆ ಹಿಂಪಡೆಯಲಾಗಿದೆ. ಬಳಸಲಾದ ದ್ರಾವಣ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ನಮಗೆ ಐವಿ ದ್ರಾವಣದ ಮೇಲೆ ಅನುಮಾನವಿದೆ. ಅದರ ಲ್ಯಾಬ್ ವರದಿ ಬರಲು ಎಂಟು, ಒಂಬತ್ತು ದಿನ ಆಗಬಹುದು. ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ಡಾಕ್ಟರ್‌ಗಳು ಸರಿಯಾಗಿ ಕೆಲಸ ಮಾಡಿದ್ದಾರೆ. ಈಗ ತಜ್ಞರ ಸಮಿತಿ ಮಾಡಿದ್ದೇವೆ. ಅವರು ಎಲ್ಲವನ್ನೂ ಪರಿಶೀಲನೆ ಮಾಡುತ್ತಾರೆ.

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಪ್ರಕರಣದಲ್ಲಿ ಸಂಶಯಗಳಿವೆ. ಸಿಸೇರಿಯನ್ ಡೆಲಿವರಿಯಲ್ಲಿ ಮಾತ್ರ ಸಾವಾಗಿವೆ. ಸಿಸೇರಿಯನ್‌ನಲ್ಲಿ ಐವಿ ಬಳಕೆ ಮಾಡಲಾಗುತ್ತದೆ. ಬ್ಯಾಕ್ಟೀರಿಯಾದಿಂದ ಕಿಡ್ನಿ ಮೇಲೆ ಎಫೆಕ್ಟ್ ಆಗುತ್ತದೆ. ಇದರ ಬಗ್ಗೆ ಪರೀಕ್ಷೆಗೆ ಕಳುಹಿಸಿದ್ದೇವೆ. ಮುಂದೆ ಇಂತಹ ಘಟನೆ ಆಗಬಾರದು. ತಮಿಳುನಾಡು ಮಾದರಿ ಔಷಧ ಖರೀದಿ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ.

-ಶರಣ ಪ್ರಕಾಶ್ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net