ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾಯೋಜನೆ 2041

sundresh
Published on

ಶಿವಮೊಗ್ಗ: ಶಿವಮೊಗ್ಗ ಹಾಗೂ ಭದ್ರಾವತಿ ನಗರ ವ್ಯಾಪ್ತಿ ಬೆಳವಣಿಗೆ ಗಮನದಲ್ಲಿರಿಸಿಕೊಂಡು ಸೂಡಾದಿಂದ (ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ) ಮಹಾಯೋಜನೆ-2041 ಸಿದ್ಧವಾಗುತ್ತಿದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಹಿಂದೆ 2012ರಲ್ಲಿ ಮಹಾಯೋಜನೆ ಸಿದ್ಧವಾಗಿತ್ತು. 2021ರಲ್ಲಿ ಮಹಾಯೋಜನೆ ರೂಪಿಸಬೇಕಿತ್ತು. ಆದರೆ ಕಾರಣಾಂತರದಿಂದ ಸಾಧ್ಯವಾಗಿಲ್ಲ. ಈಗ 2041ರವರೆಗೆ ಶಿವಮೊಗ್ಗ ಹಾಗೂ ಭದ್ರಾವತಿ ಬೆಳವಣಿಗೆಯನ್ನು ಅಂದಾಜು ನಗರಗಳ ಬೆಳವಣಿಗೆಗೆ ಅನುಕೂಲ ಆಗುವಂತೆ ಯೋಜನೆ ಸಿದ್ಧಪಡಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಮಾನ ನಿಲ್ದಾಣವೂ ಇರುವುದರಿಂದ ಮುಂದಿನ ವರ್ಷಗಳಲ್ಲಿ ಅವಳಿ ನಗರಗಳಲ್ಲಿ ಹೂಡಿಕೆದಾರರು ಹೆಚ್ಚು ಹೂಡಿಕೆ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಕೈಗಾರಿಕೆಗೆ ನಾವು ಹೆಚ್ಚಿನ ಒತ್ತು ನೀಡಬೇಕು. ಇದೇ ಕಾರಣದಿಂದ ಸೋಗಾನೆಯಲ್ಲಿ ಜಮೀನು ಕಾಯ್ದಿರಿಸಲಾಗಿದೆ ಎಂದರು.

ಜನಸಂಖ್ಯೆ ಆಧಾರದಲ್ಲಿ ಸಾರ್ವಜನಿಕ ಸ್ಥಳಗಳಲ್ಲೂ ಜಾಗ ಕಾಯ್ದಿರಿಸಬೇಕಿದೆ. ರಸ್ತೆ, ಪಾರ್ಕ್‌ಗಳಿಗೆ ಭೂಮಿ ಮೀಸಲಿರಿಸಬೇಕು. ನಗರಗಳ ಸೌಂದರ್ಯ ಹೆಚ್ಚಿಸಲು ಒತ್ತು ನೀಡಬೇಕು. ಇದಕ್ಕಾಗಿ ವಿವಿಧ ವಲಯಗಳ ಪರಿಣಿತರು, ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಭಾರಿ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ನಗರದ ಹೊರವಲಯದ ವಿಶಾಲ ಪ್ರದೇಶದಲ್ಲಿ ವ್ಯವಸ್ಥಿತ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಕ್ರಿಯಾ ಯೋಜನೆ ನಿರ್ಮಾಣಕ್ಕೆ ಸಂಬಂಧಿಸಿ ಸಾರ್ವಜನಿಕರು ನೀಡುವ ಸಲಹೆಯನ್ನು ಪ್ರಾಧಿಕಾರ ಮುಕ್ತವಾಗಿ ಸ್ವೀಕರಿಸಲಿದೆ ಎಂದರು.

ಐದು ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸೂಡಾ ವ್ಯಾಪ್ತಿ ಆಯ್ದ ನಾಲ್ಕು ಕೆರೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಶೀಘ್ರದಲ್ಲೇ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. 120 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಗರದ ಹೊರವಲಯ ಊರುಗಡೂರು ಪ್ರದೇಶದಲ್ಲಿ ಸುಸಜ್ಜಿತ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. 2 ಬೆಡ್ ರೂಂ ಮನೆಗಳಿಗೆ 38 ಲಕ್ಷ ಹಾಗೂ 3 ಬೆಡ್ ರೂಂ ಮನೆಗಳಿಗೆ 55 ಲಕ್ಷ ರೂ. ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ಗೋಪಶೆಟ್ಟಿಕೊಪ್ಪದಲ್ಲಿ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ 104 ಎಕರೆ ಭೂಪ್ರದೇಶದಲ್ಲಿ, ರೈತರೊಂದಿಗೆ ಒಡಂಬಡಿಕೆಯಾದ 30 ಎಕರೆ ಅಭಿವೃದ್ಧಿಪಡಿಸಲಾಗುವುದು. ನಿದಿಗೆ ಮತ್ತು ಸೋಮಿನಕೊಪ್ಪದಲ್ಲೂ ಬಡಾವಣೆ ನಿರ್ಮಿಸಲಾಗುವುದು ಎಂದು ಹೇಳಿದರು.

ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ನಿರ್ದೇಶಕರಾದ ಸಿದ್ದಪ್ಪ, ಪ್ರವೀಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net