

ರಾಮನಗರ : ನಗರಾಭಿವೃದ್ದಿ ಪ್ರಾಧಿಕಾರ ತಯಾರಿಸಿರುವ ಮಾಸ್ಟರ್ ಪ್ಲಾನ್ ಜು.1ರಿಂದ ಅನ್ವಯವಾಗುವಂತೆ ಅಧಿಸೂಚನೆ ಹೊರಡಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಮುರಳೀಧರ್ ತಿಳಿಸಿದರು.
ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾಧಿಕಾರ ಮೂಲ ನಕ್ಷೆ ಮತ್ತು ಪ್ರಸ್ತುತ ಇರುವ ಭೂಮಿಯ ಬಳಕೆಯ ನಕ್ಷೆ ಒಳಗೊಂಡು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ ಎಂದರು. 1995ರಲ್ಲಿ ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ನಂತರ ಚನ್ನಪಟ್ಟಣ ನಗರ ಪ್ರದೇಶವನ್ನು ವಿಭಜಿಸಿ ರಾಮನಗರ ನಗರಾಭಿವೃದ್ಧಿ ಪ್ರದೇಶ ಅಸ್ತಿತ್ವಕ್ಕೆ ಬಂತು.
ಇಲ್ಲಿಯವರೆಗೆ ಮಾಸ್ಟರ್ ಪ್ಲಾನ್ ಇರಲಿಲ್ಲ. ಮಧ್ಯಂತರ ಯೋಜನೆ ಜಾರಿಯಲ್ಲಿತ್ತು. ಅದನ್ನೇ ಪಾಲಿಸಿಕೊಂಡು ಬರಲಾಗಿದೆ. ನಗರದ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಇದೀಗ ಈ ಯೋಜನೆ ಸಿದ್ಧಗೊಂಡಿದ್ದು, ಸರ್ಕಾರ ಅಧಿಕೃತವಾಗಿ ಘೋಷಿಸಬೇಕಾಗಿದೆ ಎಂದರು.
ಬಡಾವಣೆಗಳಿಗೆ ಮೂಲಸೌಕರ್ಯ: ಪ್ರಾಧಿಕಾರದ ಅಧೀನದಲ್ಲಿರುವ ಸಿಜಿ/ಕಣ್ವ , ಆರ್.ಜಿ/ಅರ್ಕಾವತಿ ಮತ್ತು ಎಚ್.ಸಿ.ಎಲ್/ಹೆಲ್ತ್ ಸಿಟಿ ಬಡಾವಣೆಗಳಲ್ಲಿ ಮೂಲಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ. ಒಟ್ಟು 21.10 ಕೋಟಿ ರೂ. ವೆಚ್ಚದಲ್ಲಿ ಯುಜಿಡಿ ವ್ಯವಸ್ಥೆ, ರಸ್ತೆ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮುರಳೀಧರ್ ತಿಳಿಸಿದರು.
ಕೆರೆ ಅಭಿವೃದ್ದಿ ಪ್ರಾಧಿಕಾರದಲ್ಲಿ ಸಂಗ್ರಹವಾಗುವ ಕೆರೆ ಅಭಿವೃದ್ಧಿ ಶುಲ್ಕದ ಮೂಲಕ ಕೆರೆಗಳನ್ನು ಅಭಿವೃದ್ದಿ ಪಡಿಸಲು ಉದ್ದೇಶಿಲಾಗಿದೆ. ಕೈಲಾಂಚ ಹೋಬಳಿ, ಚಿಕ್ಕೇನಹಳ್ಳಿ ಗ್ರಾಮದ ಕೆರೆಯ ಏರಿಯನ್ನು ಅಭಿವೃದ್ದಿ ಪಡಿಸಲು ನಿರ್ಧರಿಸಲಾಗಿದೆ. ಚನ್ನಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಬಸ್ ನಿಲ್ದಾಣದ ಕಾಮಗಾರಿ ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಮನಗರ ನಗರ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಪ್ರದೇಶದ 2.5 ಎಕರೆ ಭೂಮಿ ಸರ್ಕಾರದ ಸುಪರ್ದಿನಲ್ಲಿದೆ. ಈ ಭೂಮಿಯನ್ನು ಪ್ರಾಧಿಕಾರಕ್ಕೆ ಪಡೆದು ಅಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ 6 ಮತ್ತು 7ನೇ ಅಂತಸ್ತಿನಲ್ಲಿ 6 ರಿಂದ 7 ಪರದೆಗಳ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ನಿರ್ಮಿಸುವ ಉದ್ದೇಶವಿದೆ. ಹಳೇ ಬಸ್ ನಿಲ್ದಾಣದ ಬಳಿ ಇರುವ ಎಚ್.ಡಿ. ದೇವೇಗೌಡ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯನ್ನು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಪಿಪಿಪಿ ಆಧಾರದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮುರಳೀಧರ್ ತಿಳಿಸಿದರು.
ರಾಮನಗರ ನಗರ ವ್ಯಾಪ್ತಿಯಲ್ಲಿ ರಾಯರದೊಡ್ಡಿ ಮತ್ತು ಮಹೆಬೂಬನಗರಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಎರಡೂ ಕೇಂದ್ರಗಳಿಗೆ ಸ್ವಂತ ನಿವೇಶನವಿಲ್ಲ. ಹೀಗಾಗಿ ಪ್ರಾಧಿಕಾರದ ಸಿಎ ನಿವೇಶನಗಳನ್ನು ಕೊಡಲು ನಿರ್ಧರಿಸಲಾಗಿದೆ. ಜತೆಗೆ ಪರಿಶಿಷ್ಟ ಜಾತಿ/ವರ್ಗದ ಬಾಲಕಿಯರ ಸರ್ಕಾರಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಜೀಗೇನಹಳ್ಳಿ ಸರ್ವೇನಂ.72,73, 74/2, 151, 152ರಲ್ಲಿ 1537 ಚ.ಮೀ. ಸಿಎ ನಿವೇಶನವನ್ನು ಹಂಚಿಕೆ ಮಾಡಲಾಗಿದೆ ಎಂದು ಮುರಳೀಧರ್ ತಿಳಿಸಿದರು.
ಠೇವಣಿ ದುರುಪಯೋಗ : ಠೇವಣಿ ದುರುಪಯೋಗ ಪ್ರಕರಣ ತನಿಖೆಯಲ್ಲಿ
2010-11 ರಿಂದ 2013-14ನೇ ಸಾಲಿನಲ್ಲಿ ಪ್ರಾಧಿಕಾರದ ನಿಶ್ಚಿತ ಠೇವಣಿ ದುರುಪಯೋಗ ವಾಗಿರುವ ಪ್ರಕರಣ ಸಿಬಿಐ ತನಿಖೆಯಲ್ಲಿದೆ ಎಂದು ಮುರಳೀಧರ್ ತಿಳಿಸಿದರು.