

ಶಿವಮೊಗ್ಗ: ಶಿವಮೊಗ್ಗದ ಬಡ ವರ್ಗದ ಜನರಿಗೆ ಸ್ವಂತ ಸೂರು ಕಲ್ಪಿಸದ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಷ್ಟ್ರಭಕ್ತರ ಬಳಗದಿಂದ ಬೃಹತ್ ಜನಾಗ್ರಹ ಜಾಥಾವನ್ನು ಜು.18ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಪಾಲಿಕೆ ವ್ಯಾಪ್ತಿಯ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಆಶ್ರಯ ಯೋಜನೆಯಡಿ 3000 ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. 2017-18ರಲ್ಲಿ ಆರಂಭಗೊಂಡಿದ್ದ ಯೋಜನೆ ಮೂರು ವರ್ಷದಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಕಳೆದ ಏಳೆಂಟು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಹಾಗಾಗಿ ತಕ್ಷಣವೇ ಬಾಕಿ ಮನೆಗಳನ್ನು ಪೂರೈಸಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಬೇಕಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅಂದು ಬೆಳಗ್ಗೆ 10.30ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಜಾಥಾ ಆರಂಭಗೊಳ್ಳಲಿದ್ದು, ಗಾಂಧಿಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಬಡವರಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಎಲ್ಲ ಮೂರು ಸಾವಿರ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು. ಮುಂಗಡವಾಗಿ ಹಣ ಪಾವತಿಸಿ ಸೂರು ಸಿಗದೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತಕ್ಷಣವೇ ಮನೆಗಳನ್ನು ನಿರ್ಮಿಸಿಕೊಟ್ಟು ನ್ಯಾಯ ಒದಗಿಸಬೇಕು. ಜನಪ್ರತಿನಿಧಿಗಳಿಲ್ಲದೆ ಅಭಿವೃದ್ಧಿ ಕುಂಠಿತವಾಗಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ತಕ್ಷಣವೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಫಲಾನುಭವಿಗಳ ವಂತಿಕೆ ಸೇರಿ 7.77 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಎಸ್‌ಸಿಗಳಿಗೆ 598, ಎಸ್‌ಟಿಗಳಿಗೆ 161, ಸಾಮಾನ್ಯರಿಗೆ 1684 ಹಾಗೂ ಅಲ್ಪಸಂಖ್ಯಾತರಿಗೆ 552 ಮನೆಗಳು ಹಂಚಿಕೆ ಮಾಡಲಾಗಿದೆ. ಪ್ರಸ್ತುತ 228 ಮನೆಗಳ ಕೀ ಹಸ್ತಾಂತರಿಸಲಾಗಿದೆ. ಇದೇ ಜು.31ಕ್ಕೆ 1,200 ಹಾಗೂ ಆಗಸ್ಟ್ 31ಕ್ಕೆ 1,200 ಮನೆಗಳ ಹಸ್ತಾಂತರ ಮಾಡಬೇಕಿತ್ತು. ಆ ಬಡಾವಣೆಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.