

ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಶರಾವತಿ ಉಳಿಸಿ ಎಂಬ ಕೂಗು ಮುಗಿಲು ಮುಟ್ಟಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ವಿರೋಧಿಸಿ ಶರಾವತಿ ನದಿ-ಕಣಿವೆ ಉಳಿಸಿ ಹೋರಾಟ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ನಡೆದ ಪ್ರತಿಭಟನೆ ಪರಿಸರವಾದಿಗಳ ಕೂಗಿಗೆ ಬಲ ನೀಡಿದೆ.
ವಿವಿಧ ಸಂಘಟನೆಗಳು, ಮಠಾಧೀಶರು, ವಿದ್ಯಾರ್ಥಿಗಳು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಶರಾವತಿ ಪರವಾಗಿ ದನಿ ಎತ್ತಿದರು. ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಮಾತ್ರವಲ್ಲದೆ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಪ್ರಸ್ತಾವನೆಯನ್ನೂ ಕೈ ಬಿಡಬೇಕೆಂದು ಆಗ್ರಹಿಸಿದರು.
ಬುಧವಾರ ಸೀನಪ್ಪ ಶೆಟ್ಟಿ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ನೂರಾರು ಮಂದಿ ಹೆಜ್ಜೆ ಹಾಕಿದರು. ಡಿಸಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಹಲವರು ಅಭಿಪ್ರಾಯ ಹಂಚಿಕೊಂಡರು. ಅವೈಜ್ಞಾನಿಕ ಯೋಜನೆ ಜಾರಿಗೊಳಿಸುವ ಮೂಲಕ ಸೂಕ್ಷ್ಮ ಪರಿಸರವನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆಯೇ ಒಂದು ಬೋಗಸ್. ಶರಾವತಿ ಪಂಪ್ಡ್ ಸ್ಟೋರೇಜ್ ಮತ್ತು ಶರಾವತಿ ನದಿ ತಿರುವು ಯೋಜನೆಗಳನ್ನು ಶಾಶ್ವತವಾಗಿ ಕೈ ಬಿಡಬೇಕು. ಎಂಟು ವರ್ಷಗಳ ಹಿಂದೆ ಮುನ್ನೆಲೆಗೆ ಬಂದ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಅಪಾರ ಪ್ರಮಾಣದಲ್ಲಿ ಪರಿಸರ ನಾಶ ಮಾಡುವ ನಿರರ್ಥಕ ಯೋಜನೆ ಎಂದರು.
ಶರಾವತಿ ಸಿಂಗಳೀಕ ಅಭಯಾರಣ್ಯದ 354 ಎಕರೆ ದಟ್ಟ ಕಾಡು ನಾಶವಾಗಲಿದೆ. ಸಿಂಗಳೀಕಗಳ ಆವಾಸ ಸ್ಥಾನಕ್ಕೆ ಮಾರಕವಾದ ಯೋಜನೆ ಇದಾಗಿದೆ. ಕೆಪಿಸಿ ಅಧಿಕಾರಿಗಳು ಸರ್ಕಾರಕ್ಕೆ ಯೋಜನೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದೊಂದು ಪರಿಸರ ಸ್ನೇಹಿ ಯೋಜನೆ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ವನ್ಯಜೀವಿ ಮಂಡಳಿ ಅನುಮೋದನೆಯೂ ಸಿಕ್ಕಿರುವುದು ಆಶ್ಚರ್ಯಕರ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಹೊಸನಗರ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ತೊಗರ್ಸಿ ಮಳೇಹಿರೇಮಠದ ಶ್ರೀ ಮಹಾಂತ ಸ್ವಾಮಿಜಿ, ಪರಿಸರಾಸಕ್ತರಾದ ಪ್ರೊ. ಬಿ.ಎಂ.ಕುಮಾರಸ್ವಾಮಿ, ಅಖಿಲೇಶ್ ಚಿಪ್ಪಳಿ, ಬಾಲಕೃಷ್ಣ ನಾಯ್ಡು, ನವ್ಯಶ್ರೀ ನಾಗೇಶ್, ಡಾ. ಶ್ರೀಪತಿ, ಎಂ.ಶಂಕರ್ ಭಾಗವಹಿಸಿದ್ದರು.