29 ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ

21 SARAG 2
ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಸರಗೂರು ತಾಲೂಕಿನ ಪಟ್ಟಣದ ಚಿಕ್ಕದೇವಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕ ಸಮಾಜದ ಮುಖಂಡರು.
Published on

ಸರಗೂರು : ಶಾಸಕ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಯಕ ಸಮಾಜದ ವತಿಯಿಂದ ಆ.29 ರಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತಿರ್ಮಾನ ಮಾಡಲಾಯಿತು.

ಪಟ್ಟಣದ 9 ವಾರ್ಡ್‌ನ ಚಿಕ್ಕ ದೇವಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ನಾಯಕ ಸಮಾಜದ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿಬಂತು.

ಜೆಡಿಎಸ್ ಪಕ್ಷದ ಮುಖಂಡ ಜಯಪ್ರಕಾಶ್(ಜೆಪಿ) ಮಾತನಾಡಿ, ನಾಯಕ ಸಮಾಜದ ಪ್ರಭಾವಿ ನಾಯಕರಾದ ರಾಜಣ್ಣ ಸಹಕಾರ ಸಚಿವರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದರು. ಯಾವುದೇ ನೋಟಿಸ್ ನೀಡದೆ ಕಾಂಗ್ರೆಸ್ ಹೈಕಮಾಂಡ್ ವಜಾ ಮಾಡಿರುವುದನ್ನು ಸಮಾಜ ಖಂಡಿಸುತ್ತದೆ. ಮುಖ್ಯಮಂತ್ರಿಗಳ ಬೆನ್ನೆಲುಬಾಗಿದ್ದರು ಎಂಬ ಕಾರಣದಿಂದ ಅವರನ್ನು ವಜಾ ಮಾಡಲಾಗಿದೆ. ನಾಯಕ ಸಮಾಜದಿಂದ ಯಾರೂ ಮುಖ್ಯಮಂತ್ರಿಯಾಗಿಲ್ಲ. ರಾಜಣ್ಣ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬೇಡಿಕೆಯ ಹೇಳಿಕೆ ನೀಡುತ್ತಿದ್ದರು. ಇದರೊಂದಿಗೆ ಮುಖ್ಯಮಂತ್ರಿ ಸ್ಥಾನವನ್ನೂ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ಸಿಗರೇ ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ಇದ್ದದ್ದನ್ನು ನೇರವಾಗಿ ಹೇಳುವ ಗುಣದವರು ರಾಜಣ್ಣ. ಬಿ.ನಾಗೇಂದ್ರ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದರೂ ಕೇಳಿ ರಾಜೀನಾಮೆ ಪಡೆದರು. ಅದರೆ ರಾಜಣ್ಣ ವಿಷಯದಲ್ಲಿ ಹೀಗಾಗಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಎಚ್.ಡಿ. ಕೋಟೆ ತಾಲೂಕಿನ ನಾಯಕ ಸಮಾಜದ ಅಧ್ಯಕ್ಷ ದೊಡ್ಡ ನಾಯಕ ಮಾತನಾಡಿ, 2023ರ ಚುನಾವಣೆಯಲ್ಲಿ ಕಾಂಗ್ರೆಸ್ 136 ಕ್ಷೇತ್ರದಲ್ಲಿ ಗೆಲ್ಲಲು ನಾಯಕ ಸಮಾಜ ಪ್ರಭಾವ ಬೀರಿದೆ. ತಕ್ಷಣವೇ ಹೈಕಮಾಂಡ್ ಅವರನ್ನು ಸಚಿವ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಸ್ಥಳೀಯ ಚುನಾವಣೆಯಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಪಂ ಸದಸ್ಯರಾದ ಶ್ರೀನಿವಾಸ, ನವೀನ್ ಕುಮಾರ್, ಸರಗೂರು ತಾಲೂಕು ನಾಯಕ ಸಮಾಜದ ಅಧ್ಯಕ್ಷ ಪುರದಕಟ್ಟೆ ಬಸವರಾಜು, ಗ್ರಾಪಂ ಸದಸ್ಯ ಜಯರಾಮ್, ಕೋತ್ತೇಗಾಲ ಗ್ರಾಪಂ ಅಧ್ಯಕ್ಷ ಟಿ.ಕುಮಾರ್, ಸಿಂಡಿಕೇಟ್ ಬ್ಯಾಂಕ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ಚಿಕ್ಕಮಾದು ಅಭಿಮಾನಿಗಳ ಬಳಗ ಅಧ್ಯಕ್ಷ ಜಿನ್ನಹಳ್ಳಿ ರಾಜನಾಯಕ, ಯಜಮಾನ ಬೆಟ್ಟನಾಯಕ, ಕೆಇಬಿ ಶಿವಣ್ಣ, ಶಂಭುಲಿಂಗನಾಯಕ, ರಮೇಶ್,ರವಿ, ನಾಗೇಂದ್ರ, ಅಂಕನಾಯಕ,ಮಹದೇವನಾಯಕ, ದಾಸಪ್ಪ, ಸಾಗರೆ ಶಂಕರ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net