ಭಾರಿ ಬೆಂಕಿ ಅವಘಡ; ಇಬ್ಬರು ಮಕ್ಕಳು ಬಲಿ, 800 ಗುಡಿಸಲುಗಳು ಸುಟ್ಟು ಭಸ್ಮ| Fire

fire
Published on

ಘಟನೆಯಲ್ಲಿ ಮೃತಪಟ್ಟ ಎರಡೂವರೆ ವರ್ಷ ಮತ್ತು ಮೂರು ವರ್ಷದ ಎರಡು ಮಕ್ಕಳ ಸುಟ್ಟ ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರಾದ ರೋಹಿಣಿ ಅಮಿತ್ ಗೋಯಲ್ ತಿಳಿಸಿದ್ದಾರೆ.

ಅಗ್ನಿಶಾಮಕ ದಳದವರು ಮೂರು ಗಂಟೆಗಳ ಕಾಲ ಸತತವಾಗಿ ಕಾರ್ಯ ನಿರ್ವಹಿಸಿದ ನಂತರ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ.

Delhi: ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಸೆಕ್ಟರ್ 17 ರಲ್ಲಿರುವ ಜುಗ್ಗಿ ಕ್ಲಸ್ಟರ್‌ನಲ್ಲಿ ಭಾನುವಾರ (27) ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಐದು ಜನರು ಗಾಯಗೊಂಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದೇನು?

ಸೆಕ್ಟರ್ 17 ರ ಶ್ರೀನಿಕೇತನ ಅಪಾರ್ಟ್‌ಮೆಂಟ್ ಬಳಿ ಬೆಂಕಿ ಕಾಣಿಸಿಕೊಂಡಿದೆ ಎಂದು ನಮಗೆ ಕರೆ ಬಂತು. ನಾವು ತಕ್ಷಣ 17 ಅಗ್ನಿಶಾಮಕ ವಾಹನಗಳನ್ನು ಕಳುಹಿಸಿದ್ದೇವೆ. ಬೆಂಕಿಯ ತೀವ್ರತೆಯನ್ನು ಗಮನಿಸಿದ ನಂತರ, ಮಧ್ಯಾಹ್ನ 12.40 ರ ಸುಮಾರಿಗೆ ನಾವು ಅದನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿದ್ದೇವೆ. ಒಟ್ಟು 26 ಅಗ್ನಿಶಾಮಕ ದಳಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡಿಎಫ್‌ಎಸ್ ಅಧಿಕಾರಿ ಹೇಳಿದ್ದೇನು?

ಸುಮಾರು ಐದು ಎಕರೆ ಪ್ರದೇಶದಲ್ಲಿದ್ದ 800 ಕ್ಕೂ ಹೆಚ್ಚು ಗುಡಿಸಲುಗಳಿಗೆ ಬೆಂಕಿ ಆವರಿಸಿತು. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಹೋರಾಡುತ್ತಿದ್ದಂತೆ ದಟ್ಟವಾದ ಹೊಗೆ ಆಕಾಶಕ್ಕೆ ಹಾರಿತು. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ಹಿಡಿಯಿತು. ತಂಪಾಗಿಸುವ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಇಬ್ಬರು ಮಕ್ಕಳ ಶವಗಳನ್ನು ಹೊರತೆಗೆದು ತಕ್ಷಣ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಡಿಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ.

(ಏಜೆನ್ಸೀಸ್)

ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ಲಸ್ಟರ್ ಒಳಗೆಯೇ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಹೇಳಲಾಗಿದೆ. ಆ ಪ್ರದೇಶದಲ್ಲಿ ಯಾವುದೇ ವಿದ್ಯುತ್ ವೈರಿಂಗ್ ವ್ಯವಸ್ಥೆಗಳಿರಲಿಲ್ಲ. ಆದರೆ ಹಲವಾರು ಎಲ್‌ಪಿಜಿ ಸಿಲಿಂಡರ್‌ಗಳು ಕಂಡುಬಂದಿವೆ, ಇದು ಬೆಂಕಿ ಹರಡಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಪ್ರದೇಶದಲ್ಲಿ ಶೋಧ ಮತ್ತು ತಂಪಾಗಿಸುವ ಕಾರ್ಯಾಚರಣೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net