ದೇವರ ಮೀನು ಕೊಟ್ಟ ಮುನ್ಸೂಚನೆ ನಿಜವಾಯ್ತು! ಅಲುಗಾಡಿದ ಅಮೆರಿಕ, ಜಗತ್ತಿಗೆ ಕಾದಿದೆ ಗಂಡಾಂತರ? Doomsday Fish

Doomsday Fish
Published on

Doomsday Fish : ಕಳೆದ ನವೆಂಬರ್​ 14ರಂದು ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಡೂಮ್ಸ್​ಡೇ ಮೀನು ಎಂದು ಕರೆಯಲ್ಪಡುವ ಅತಿ ಅಪರೂಪದ ಓರ್ಫಿಶ್​ ಕಳೇಬರ ಪತ್ತೆಯಾಯಿತು. ಈ ಮೀನು ಕಾಣಿಸಿಕೊಳ್ಳುವುದು ತುಂಬಾ ವಿರಳ. ಕಾಣಿಸಿಕೊಂಡರೆ ಮಾತ್ರ ಜಗತ್ತಿಗೆ ಏನೋ ಗಂಡಾಂತರ ಕಾದಿದೆ ಅನ್ನೋ ಮುನ್ಸೂಚನೆಯಂತೆ. ಈ ಕಾರಣಕ್ಕೆ ಇದನ್ನು ಡೂಮ್ಸ್​ಡೇ (ಪ್ರಳಯ ದಿನ) ಮೀನು ಎಂದು ಕರೆಯುತ್ತಾರೆ.

ಈ ಮೀನು ಕಾಣಿಕೊಂಡ ಬೆನ್ನಲ್ಲೇ ಆಘಾತಕಾರಿ ಘಟನೆ ವರದಿಯಾಗಿದೆ. ಅದೇನೆಂದರೆ, ಮೀನಿನ ಕಳೇಬರ ಕಾಣಿಸಿಕೊಂಡ ಕ್ಯಾಲಿಫೋರ್ನಿಯಾದಲ್ಲಿ ಭಾರಿ ಭೂಕಂಪನ ವರದಿಯಾಗಿದೆ. ಉತ್ತರ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ರಿಕ್ಟರ್​ ಮಾಪಕದಲ್ಲಿ 7 ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ ಕ್ಯಾಲಿಫೋರ್ನಿಯಾ ಮತ್ತು ಒರೆಗಾನ್ ಕರಾವಳಿ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಡೂಮ್ಸ್​ಡೇ ಮೀನು ಕಾಣಿಕೊಂಡ 21 ದಿನಗಳ ನಂತರ ಭೂಕಂಪನ ಸಂಭವಿಸಿದೆ.

ಭೂಕಂಪದ ಪ್ರಭಾವದಿಂದಾಗಿ, ಪೆಟ್ರೋಲಿಯಾ, ಸ್ಕಾಟಿಯಾ, ಕಾಬ್ ಮತ್ತು ಇತರ ಪ್ರದೇಶಗಳಲ್ಲಿ ಪ್ರಬಲ ಕಂಪನಗಳಿಂದ ಕಟ್ಟಡಗಳು ನಡುಗಿದವು. ಮನೆಯೊಳಗಿನ ವಸ್ತುಗಳು ಅಲುಗಾಡಿದಲ್ಲದೆ, ಚೆಲ್ಲಾಪಿಲ್ಲಿಯಾಗಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತಕ್ಷಣಕ್ಕೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ಕರಾವಳಿ ನಗರವಾದ ಫೆರ್ನ್‌ಡೇಲ್‌ನಿಂದ ಪಶ್ಚಿಮಕ್ಕೆ 63 ಕಿ.ಮೀ. ದೂರದಲ್ಲಿ ಭೂಕಂಪನವಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡೂಮ್ಸ್​ಡೇ ಮೀನು ಮುನ್ಸೂಚನೆ

ಜಪಾನಿಗರ ನಂಬಿಕೆಯ ಪ್ರಕಾರ, ಡೂಮ್ಸ್​ಡೇ ಮೀನು ಕಾಣಿಸಿಕೊಳ್ಳುವುದು ಸಮೀಪಿಸುತ್ತಿರುವ ವಿಪತ್ತಿನ ಮುನ್ಸೂಚನೆಯಾಗಿದೆ. 2011 ರ ಭೂಕಂಪದ ಮೊದಲು ಜಪಾನ್ ಕರಾವಳಿಯಲ್ಲಿ ಓರ್ಫಿಶ್ ಕಂಡುಬಂದ ನಂತರ ಮೂಢನಂಬಿಕೆ ಮತ್ತಷ್ಟು ಹರಡಿತು. ಈ ಮೀನನ್ನು “ಸಮುದ್ರ ದೇವರ ಅರಮನೆಯ ಸಂದೇಶವಾಹಕ” ಎಂದು ಕರೆಯಲಾಗುತ್ತದೆ. ದೇವರ ಮೀನು ಎಂದು ನಂಬಲಾಗಿದ್ದು, ಸುನಾಮಿ ಮತ್ತು ಭೂಕಂಪಗಳ ಬಗ್ಗೆ ಎಚ್ಚರಿಕೆ ನೀಡುವಾಗ ಈ ಮೀನುಗಳು ಕಾಣಿಸಿಕೊಳ್ಳುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿರುವ ಅಲಿಸನ್ ಲಾಫೆರಿಯರ್, ಕ್ಯಾಲಿಫೋರ್ನಿಯಾದ ಎನ್‌ಸಿನಿಟಾಸ್‌ನಲ್ಲಿರುವ ಗ್ರ್ಯಾಂಡ್‌ವ್ಯೂ ಬೀಚ್‌ನಲ್ಲಿ ತನ್ನ ಶ್ವಾನದ ಜೊತೆ ತಿರುಗಾಡುತ್ತಿದ್ದಾಗ ಕಡಲತೀರದಲ್ಲಿ ಕಲ್ಲುಗಳ ರಾಶಿಯ ನಡುವೆ ಬೃಹತ್ ಗಾತ್ರದ ಮೀನು ಕಂಡಿತು. ಅದರ ಬಳಿ ಹೋಗಿ ಪರೀಕ್ಷಿಸಿದಾಗ ಅದು ಆರ್ಫಿಶ್ ಅಥವಾ ಡೂಮ್ಸ್​ಡೇ ಮೀನು ಎಂದು ಗೊತ್ತಾಯಿತು. ಕಳೆದ ನವೆಂಬರ್​ 14ರಂದು ಮೀನಿನ ಕಳೇಬರ ಪತ್ತೆಯಾಗಿತ್ತು. ಅಂದೇ ಅಪಾಯದ ಮುನ್ಸೂಚನೆ ಸಿಕ್ಕಿತ್ತು. ಇದೀಗ ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ.

ಕಳೆದ ಆಗಸ್ಟ್ 10ರಂದು ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಡೂಮ್ಸ್​ಡೇ ಮೀನಿನ ಕಳೇಬರ ಪತ್ತೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಲಾಸ್ ಏಂಜಲೀಸ್‌ನಲ್ಲಿ ಭೂಕಂಪನ ವರದಿಯಾಯಿತು. ಆದರೆ, ಭೂಕಂಪನದ ತೀವ್ರತೆ ಕಡಿಮೆ ಇದ್ದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ. ಈ ಮೀನು ಕಾಣಿಸಿಕೊಂಡಾಗಲೆಲ್ಲ ಏನಾದರೂ ಒಂದು ವಿಕೋಪ ಸಂಭವಿಸುತ್ತದೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ.

ಅಂದಹಾಗೆ ಈ ಓರ್ಫಿಶ್ ಉದ್ದವಾದ ಈಲ್ ತರಹದ ದೇಹವನ್ನು ಹೊಂದಿದೆ. ಸಾಮಾನ್ಯವಾಗಿ ಇದು ಸಮುದ್ರದ ಕೆಳಭಾಗದಲ್ಲಿ ವಾಸಿಸುತ್ತದೆ. ಮೇಲ್ಮೈಯಿಂದ ಸುಮಾರು 700 ರಿಂದ 3,280 ಅಡಿ ಕೆಳಗೆ ಜೀವಿಸುತ್ತವೆ. ಆದ್ದರಿಂದ, ಮೇಲ್ಮೈನಲ್ಲಿ ಈ ಜೀವಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಈ ಮೀನುಗಳ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅಥವಾ ಏನಾದರೂ ಆದಾಗ ಮಾತ್ರ ಹೊರಗಡೆ ಬರುತ್ತವೆ ಹೊರತು, ಇದು ಸನ್ನಿಹಿತವಾಗುತ್ತಿರುವ ವಿಪತ್ತಿನ ಸಂಕೇತವಲ್ಲ ಎಂದು ಸಂಶೋಧಕರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net