

ಹುಣಸೂರು: ಅಂಧರಿಗೆ ಸ್ಥಗಿತವಾಗಿದ್ದ ಮಾಸಾಶನವನ್ನು ಮತ್ತೆ ಸಿಗುವಂತೆ ಮಾಡುವಲ್ಲಿ ದಲಿತ ಸಂಘಟನೆ ಯಶಸ್ವಿಯಾಯಿತು.
ತಾಲೂಕಿನ ಗಾವಡಗೆರೆ ಹೋಬಳಿಯ ಕೆರೆಯೂರು ಗ್ರಾಮದ ಅಂಗವಿಕಲ ಶಿವಶೆಟ್ಟರು ಹುಟ್ಟಿನಿಂದಲೇ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದರು. ಮನೆಯವರ ತಿರಸ್ಕಾರಕ್ಕೆ ಒಳಗಾಗಿ ಅತಂತ್ರ ಸ್ಥಿತಿಯಲ್ಲೇ ಬದುಕುತ್ತಿದ್ದರು. ಈ ಹಿಂದೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಅವರು ಶಿವಶೆಟ್ಟರ ಸಮಸ್ಯೆಯನ್ನು ಅರಿತು ಅಂಗವಿಕಲ ಮಾಸಾಶನ ಮಾಡಿಸಿ ಕೊಟ್ಟಿದ್ದರು. ಆದರೆ ಕಳೆದ 6 ತಿಂಗಳಿನಿಂದ ಮಾಸಾಶನ ನಿಂತು ಹೋಗಿತ್ತು. ಪರಿಣಾಮ ದಿನದ ಊಟಕ್ಕೆ ಹಣವಿಲ್ಲದೆ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿತ್ತು. ಮಾಸಾಶನ ಪಡೆಯುವ ಸಲುವಾಗಿ ತಾಲೂಕು ಕಚೇರಿಗೆ ಅವರು ಅಲೆಯುತ್ತಿರುವ ವಿಷಯ ತಿಳಿದ ನಿಂಗರಾಜ ಮಲ್ಲಾಡಿ ಜ.17ರಂದು ಶಿವಶೆಟ್ಟರನ್ನು ತಹಸೀಲ್ದಾರ್‌ರ ಬಳಿ ಕರೆದೊಯ್ದು ದಾಖಲೆಗಳನ್ನು ಸರಿಪಡಿಸಿ ಕಳೆದ 6 ತಿಂಗಳ ಮಾಸಾಶನವೂ ಸೇರಿದಂತೆ ಬಾಕಿಯಿರುವ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಆಗುವಂತೆ ಕ್ರಮವಹಿಸಿದರು.
ನಿಂಗರಾಜ ಮಲ್ಲಾಡಿ ಮಾತನಾಡಿ, ಇಂತಹ ಅಸಹಾಯಕರ ಸಮಸ್ಯೆಗಳನ್ನು ಅಧಿಕಾರಿಗಳು ಮಾನವೀಯ ದೃಷ್ಟಿಯಿಂದಲೇ ಗಮನಿಸಿ ಪರಿಹರಿಸಬೇಕು. ತಹಸೀಲ್ದಾರ್ ಮಂಜುನಾಥ್ ಅವರ ಸಕಾಲಿಕ ಸ್ಪಂದನೆ ನಮಗೆ ಸಂತಸ ತಂದಿದೆ ಎಂದರು.