ಸಾಲಕ್ಕಿಲ್ಲ ದಾಖಲೆ, ಮುಖದಲ್ಲಿಲ್ಲ ಪಶ್ಚಾತಾಪ! ಸ್ಥಳ ಮಹಜರಿಗೆ ಅಫಾನ್ ಕರೆತಂದ ಪೊಲೀಸರು​ | Mass Murder

ವಿಜಯವಾಣಿ - 2025-03-07T115919.457
Published on

Kerala Mass Murder: ಕೇರಳದ ತಿರುವನಂತಪುರಂನಲ್ಲಿ ಯುವಕನೊಬ್ಬನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣದ ತನಿಖೆ ಇದೀಗ ಮತ್ತಷ್ಟು ಚುರುಕುಗೊಂಡಿದೆ. ತನ್ನ ಪ್ರೇಯಸಿ ಸೇರಿದಂತೆ ಕುಟುಂಬದ ಐವರನ್ನು ಕೇರಳದ ವೆಂಜರಮೂಡಿನಲ್ಲಿ ಬರ್ಬರವಾಗಿ ಹತ್ಯೆಗೈದ 23 ವರ್ಷದ ಅಫಾನ್​, ಪ್ರಸ್ತುತ ಪೊಲೀಸರ ತನಿಖೆಯ ಭಾಗವಾಗಿದ್ದಾನೆ. ಈ ಕೊಲೆಯ ಹಿಂದಿರುವ ಕಾರಣವೇನು? ತನ್ನವರನ್ನೇ ಇಷ್ಟೂ ಕ್ರೂರವಾಗಿ ಹತ್ಯೆಗೈಯುವ ಉದ್ದೇಶ ಏನಿತ್ತು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದು, ಸಾಕ್ಷಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ವೆಂಜರಮೂಡು ಹತ್ಯಾಕಾಂಡ ಪ್ರಕರಣದ ಆರೋಪಿ ಅಫಾನ್ ಜತೆ ಪಾಂಗೋಡ್ ಪೊಲೀಸರು ಸಾಕ್ಷ್ಯ ಸಂಗ್ರಹಕ್ಕಾಗಿ ಇಂದು ತಾಜೆಪಂಗೋಡಿನಲ್ಲಿ ವಾಸಿಸುತ್ತಿದ್ದ ಅಫಾನ್​ ಅಜ್ಜಿ ಸಲ್ಮಾ ಬೀವಿ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಕೊಲೆ ಪ್ರಕರಣದ ವಿಚಾರಣೆಗಾಗಿ ಆರೋಪಿಯನ್ನು ಮೂರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದ ಖಾಕಿ ಪಡೆ, ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಸಾಧನಗಳನ್ನು ಪರಿಶೀಲಿಸಿ, ಆತ ಎಸಗಿದ ಕೃತದ ಹಿಂದಿರುವ ಕಾರಣಗಳನ್ನು ಕಲೆಹಾಕುತ್ತಿದ್ದಾರೆ.

ಮೊದಲಿಗೆ ತನ್ನ ಅಜ್ಜಿಯನ್ನೇ ಕೊಲೆಗೈದ ಅಫಾನ್​, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದಿದ್ದ. ಸ್ಥಳ ಮಹಜರು ಮಾಡುತ್ತಿರುವ ಪೊಲೀಸರು, ಸಲ್ಮಾ ಬೀವಿ ಅವರ ಮನೆಯಲ್ಲಿ ಸಿಕ್ಕ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮಹಜರು ವೇಳೆ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮನೆಯ ಸುತ್ತಮುತ್ತ ಭಾರೀ ಭದ್ರತೆ ಒದಗಿಸಲಾಗಿದೆ. ಪಾಂಗೋಡ್ ಪೊಲೀಸರ ಕಸ್ಟಡಿ ನಾಳೆ (ಮಾ.08) ಕೊನೆಗೊಳ್ಳುತ್ತಿದ್ದಂತೆ ಆರೋಪಿ ಅಫಾನ್​ನನ್ನು ವಶಕ್ಕೆ ಪಡೆಯಲು ವೆಂಜರಮೂಡು ಪೊಲೀಸರು ಸಜ್ಜಾಗಿದ್ದಾರೆ.

ವಿಚಾರಣೆ ಸಮಯದಲ್ಲಿ, ಐವರ ಕೊಲೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿರುವ ಅಫಾನ್, ಸರಣಿ ಕೊಲೆಗಳಿಗೆ ಸಾಲವೇ ಕಾರಣ ಎಂದು ತನ್ನ ಹೇಳಿಕೆಯಲ್ಲಿ ಒತ್ತಿ ಹೇಳಿದ್ದ. ಇನ್ನು ಅಫಾನ್ ತಂದೆ ರಹೀಮ್​ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ವಿದೇಶದಲ್ಲಿದ್ದೆ. ಅಲ್ಲಿಯೇ 15 ಲಕ್ಷ ರೂ. ಸಾಲ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಪೊಲೀಸರಿಗೆ ಗೊಂದಲ ಮೂಡಿದ್ದು, ಇಬ್ಬರ ಹೇಳಿಕೆ ಅನುಮಾನ ಹುಟ್ಟುಹಾಕಿದೆ. ನ್ಯಾಯಾಲಯದ ಸಂಕೀರ್ಣದಲ್ಲಿ ಕಾಣಿಸಿಕೊಳ್ಳುವ ಅಫಾನ್,​ ಬರ್ಬರವಾಗಿ ಹತ್ಯೆಗೈದ ಬಗ್ಗೆ ತನಗೆ ಪಶ್ಚಾತಾಪವೇ ಇಲ್ಲ ಎನ್ನುವಂತೆ ಇರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

35 ಲಕ್ಷ ರೂ. ಸಾಲ ನಿಜವೇ?

ತನಿಖಾ ತಂಡದಿಂದಲೇ ಮತ್ತೊಂದು ತಂಡವನ್ನು ರಚಿಸಲಾಗಿದ್ದು, ಅಫಾನ್ ಮತ್ತು ಆತನ ತಂದೆ ಹೇಳಿರುವ ಹಣಕಾಸು ವಿಚಾರ ನಿಜವೇ ಎಂಬುದನ್ನು ಕಲೆಹಾಕುವಂತೆ ತಿಳಿಸಲಾಗಿದೆ. ಸಾವಿನಿಂದ ಪಾರಾಗಿರುವ ತಾಯಿ ಶೆಮಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನ ಹೇಳಿಕೆ ನೀಡಿರುವುದು ಸದ್ಯ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಈ ವಿಷಯವನ್ನು ಮತ್ತಷ್ಟು ಸ್ಪಷ್ಟಪಡಿಸಲು ಚುರುಕು ತನಿಖೆಗೆ ಮುಂದಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net