

ಬೆಂಗಳೂರು: ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸಬೇಕು ಎಂಬುದನ್ನೇ ಖಾಸಗಿ ಶಾಲೆಗಳು ಬಂಡವಾಳ ಮಾಡಿಕೊಂಡಿವೆ. ತಮ್ಮದೇ ಬ್ರಾಂಡ್ನಡಿ ಮುಖಗವಸು ತಯಾರಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡುವ ದಂಧೆಗೆ ಇಳಿದಿವೆ..!
ಹೌದು, ಇಂತಹದ್ದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕರೊನಾ ನೆಪದಲ್ಲಿ ಖಾಸಗಿ ಶಾಲೆಯೊಂದು ಮಾಸ್ಕ್ ಬಿಸಿನೆಸ್ ಶುರು ಮಾಡಿಕೊಂಡಿದೆ. ಆ ಮಾಸ್ಕ್ಗೆ 400 ರೂ. ದರ ನಿಗದಿ ಮಾಡಿ ಪಾಲಕರಿಂದ ಹಣ ಸುಲಿಗೆ ಮಾಡುತ್ತಿದೆ ಎಂದು 'ಡೆಲ್ಲಿ ಪಬ್ಲಿಕ್ ಸ್ಕೂಲ್'(ಡಿಪಿಎಸ್) ಲೋಗೋವುಳ್ಳ ಮಾಸ್ಕ್ವೊಂದರ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ.
ಶಾಲೆಯ ಲೋಗೋವುಳ್ಳ ಮಾಸ್ಕ್ನ ಚಿತ್ರ ನೋಡಿದ ಸಾರ್ವಜನಿಕರು ಹೌಹಾರಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಂಗಳೂರಿನ 'ಡೆಲ್ಲಿ ಪಬ್ಲಿಕ್ ಸ್ಕೂಲ್' ಆಡಳಿತ ಮಂಡಳಿ, ವಿದ್ಯಾರ್ಥಿಗಳಿಗೆ ಯಾವುದೇ ಮಾಸ್ಕ್ಗಳನ್ನು ನೀಡಿಲ್ಲ ಎಂದಿದೆ.
''ಆತ್ಮೀಯ ಪೋಷಕರೆ, ಕೆಲವು ಏಜೆನ್ಸಿಗಳು ಶಾಲೆಯ ಹೆಸರು ಮತ್ತು ಲೋಗೋ ಬಳಸಿಕೊಂಡು ಮಕ್ಕಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ವ್ಯಾಪಾರಸ್ಥರೊಂದಿಗೆ ನಮ್ಮ ಶಾಲೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ. ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯನ್ನೇ ಕೆಲವರು ಬಂಡವಾಳ ಮಾಡಿಕೊಂಡು ಶಾಲೆ ಹೆಸರಲ್ಲಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಈ ಬಗ್ಗೆ ಎಚ್ಚರ ವಹಿಸಿ'' ಎಂದು ಬೆಂಗಳೂರು ಉತ್ತರ 'ಡೆಲ್ಲಿ ಪಬ್ಲಿಕ್ ಶಾಲೆ'ಯು ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿರಿ ಈ ವರ್ಷದ 2ನೇ ಚಂದ್ರಗ್ರಹಣ ಹೀಗಿತ್ತು ನೋಡಿ..!