

ಬೆಂಗಳೂರು: ಕೋವಿಡ್ ನಿಯಮ ಉಲ್ಲಂಘಿಸಿ ಮಾಸ್ಕ್ ಹಾಕದೆ ಹೊರ ಬರುತ್ತಿದ್ದವರಿಗೆ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು ಇಳಿಕೆ ಮಾಡಿ ತತ್ಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಹಾಮಾರಿ ಕರೊನಾ ಸೋಂಕಿನ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದರೂ ಹಲವರು ಉಡಾಫೆ ಮಾಡುತ್ತಿದ್ದರು. ಮಾಸ್ಕ್ ಹಾಕದವರಿಗೆ ನಗರದಲ್ಲಿ 200, ಗ್ರಾಮೀಣ ಭಾಗದಲ್ಲಿ 100 ರೂ. ದಂಡ ವಸೂಲಿ ಮಾಡುತ್ತಿದ್ದರೂ ಬಹುತೇಕರು ಕರೊನಾ ನಿಯಮ ಉಲ್ಲಂಘಿಸುತ್ತಿದ್ದರು. ಹಾಗಾಗಿ ದಂಡದ ಮಿತಿಯನ್ನು ನಾಲ್ಕು ಪಟ್ಟು ಹೆಚ್ಚು ಅಂದರೆ ನಗರದಲ್ಲಿ 1,000 ರೂ. ಗ್ರಾಮೀಣ ಭಾಗದಲ್ಲಿ 500 ರೂಪಾಯಿ ವಸೂಲಿ ಮಾಡುವ ಮೂಲಕ ಸರ್ಕಾರ ಬಿಸಿ ಮುಟ್ಟಿತ್ತು.
ಕೊನೆಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಸಿಎಂ ಬಿ.ಎಸ್.ಯಡಿಯೂರಪ್ಪ, ದಂಡದ ಪ್ರಮಾಣ ಇಳಿಕೆ ಮಾಡಿದ್ದಾರೆ. ನಗರದಲ್ಲಿ 1000 ರೂ. ದಂಡದ ಬದಲು 250 ರೂ.ಗೆ, ಗ್ರಾಮೀಣ ಪ್ರದೇಶದಲ್ಲಿ 500 ರೂ. ಬದಲು 100 ರೂಪಾಯಿ ದಂಡದ ಪ್ರಮಾಣ ನಿಗದಿ ಮಾಡಿ ಬುಧವಾರ ಮಧ್ಯಾಹ್ನ ಆದೇಶಿಸಿದ್ದಾರೆ.