ತೆಲಂಗಾಣ ಮರ್ಯಾದೆ ಹತ್ಯೆಯ ಪ್ರಮುಖ ಆರೋಪಿ, ಅಮೃತಾ ರಾವ್​ ತಂದೆ ಮಾರುತಿ ರಾವ್​ ಶವವಾಗಿ ಪತ್ತೆ

Maruti Rao
Published on

ಹೈದರಾಬಾದ್​: 2018ರಲ್ಲಿ ಇಡೀ ದೇಶವನ್ನೆ ಬೆಚ್ಚಿಬೀಳಿಸಿದ್ದ ಮರ್ಯಾದೆ ಹತ್ಯೆಯ ಪ್ರಮುಖ ಆರೋಪಿ ಮಾರುತಿ ರಾವ್​ ಮೃತದೇಹ ಹೈದರಾಬಾದ್​ನಲ್ಲಿ ಪತ್ತೆಯಾಗಿದ್ದು, ಖೈರತಾಬಾದ್​ನ ಆರ್ಯ ವೈಶ್ಯ ಭವನ್​ನ 306 ಕೊಠಡಿ ಸಂಖ್ಯೆಯಲ್ಲಿ ಮೃತದೇಹ ಸಿಕ್ಕಿದೆ. ​

ಪ್ರಕರಣ ಬಗ್ಗೆ ಮಾತನಾಡಿರುವ ಸೈಫಾಬಾದ್ ಸಹಾಯಕ​ ಪೊಲೀಸ್​ ಆಯುಕ್ತ ವೇಣು ಗೋಪಾಲ್​ ರೆಡ್ಡಿ, ದೇಹವನ್ನಷ್ಟೇ ಗುರುತಿಸಲಾಗಿದೆ. ಇತರೆ ಮಾಹಿತಿ ಇನ್ನೂ ತಿಳಿದಿಲ್ಲ. ಅವರೇಕೆ ಹೈದರಾಬಾದ್​ಗೆ ಬಂದರು ಎಂಬುದು ಗೊತ್ತಿಲ್ಲ. ದೇಹವನ್ನು ಒಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಅಂದಹಾಗೆ ಮಾರುತಿ ರಾವ್ ವಿರುದ್ಧ 1 ಕೋಟಿ ರೂ.​ ಸುಫಾರಿ ನೀಡಿ ತನ್ನ ಮಗಳನ್ನು ಮದುವೆಯಾಗಿದ್ದ ಪ್ರಣಯ್​ನನ್ನು 2018ರ ಸೆಪ್ಟೆಂಬರ್​ನಲ್ಲಿ ಕೊಲೆ ಮಾಡಿಸಿದ ಆರೋಪ ಇದೆ.

ಪ್ರಣಯ್​ ದಲಿತ ಸಮುದಾಯದವನಾಗಿದ್ದ, ಅಮೃತಾ ಪ್ರಭಾವಿ ವೈಶ್ಯ ಸಮುದಾಯವಳು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇದಕ್ಕೆ ಅಮೃತಾ ತಂದೆ ಮಾರುತಿ ರಾವ್​ ಒಪ್ಪಿರಲಿಲ್ಲ. ಬಳಿಕ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದರು ಎಂದು ಹೇಳಲಾಗಿದೆ.

ಸೆಪ್ಟೆಂಬರ್​ 14, 2018ರಂದು ಗರ್ಭಿಣಿ ಪತ್ನಿಯ ಮುಂದೆ ಪ್ರಣಯ್​ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಆಸ್ಪತ್ರೆಯನ್ನು ಬಿಟ್ಟು ಬರುವಾಗ ಕೊಲೆ ಮಾಡಲಾಗಿತ್ತು. ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಬಳಿಕ ಪ್ರಕರಣದಲ್ಲಿ ಆರೋಪಿಗಳಾದ ಮಾರುತಿ ರಾವ್​, ಸಹೋದರ ಸಾವನ್​ ಸೇರಿ ಇತರರಿಗೆ ಬಂಧನವಾಗಿ 90 ದಿನಗಳಲ್ಲಿ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಲು ವಿಫಲವಾಗಿದ್ದರಿಂದ ಜಾಮೀನು ದೊರಕಿತ್ತು.

ಮಾರುತಿ ರಾವ್​ಗೆ ಗೊತ್ತಿರುವವನು ಎನ್ನಲಾದ ವ್ಯಕ್ತಿಯೊಬ್ಬನ ಮೃತದೇಹ ಶೆಡ್‌ ಒಂದರಲ್ಲಿ ಪತ್ತೆಯಾದ ಒಂದು ದಿನದ ಬೆನ್ನಲ್ಲೇ ಮಾರುತಿ ರಾವ್​ ದೇಹ ಸಿಕ್ಕಿದೆ. ಅಡಂಕಿ-ನರ್ಕತ್‌ಪಲ್ಲಿ ಹೆದ್ದಾರಿಯಲ್ಲಿರುವ ಹನುಮಾನ್‌ಪೇಟೆ ಫ್ಲೈಓವರ್ ಬಳಿಯ ನಿವಾಸಿಗಳು ತಮ್ಮ ಪ್ರದೇಶದಲ್ಲಿ ಬರುತ್ತಿರುವ ದುರ್ವಾಸನೆ ತಿಳಿದು ಪೊಲೀಸರನ್ನು ಎಚ್ಚರಿಸಿದ್ದರು. ಈ ಪ್ರಕರಣದ ತನಿಖೆಯು ನಡೆಯುತ್ತಿದ್ದು, ಪೊಲೀಸರು ಇನ್ನೂ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಿಲ್ಲ. ಇದೀಗ ಮಾರುತಿ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net