

"ಮಸಾನ್' ಖ್ಯಾತಿಯ ಬಾಲಿವುಡ್ ನಿರ್ದೇಶಕ ನೀರಜ್ ಘೇವಾನ್ ಆ್ಯಕ್ಷನ್-ಕಟ್ ಹೇಳುತ್ತಿರುವ ಹೊಸ ಸಿನಿಮಾ "ಹೋಮ್ಬೌಂಡ್'. ಚಿತ್ರದಲ್ಲಿ ಇಶಾನ್ ಖಟ್ಟರ್, ವಿಶಾಲ್ ಜೇಠ್ವಾ ಮತ್ತು ಜಾಹ್ನವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಇದೇ ವರ್ಷ ಕಾನ್ ಫಿಲಂ ಫೆಸ್ಟಿವಲ್ನಲ್ಲಿ ಪ್ರೀಮಿಯರ್ ಆಗಲಿದೆ. ಆದರೆ, ಅದಕ್ಕೂ ಮುನ್ನವೇ "ಹೋಮ್ಬೌಂಡ್'ಗೆ ಆಸ್ಕರ್ ವಿಜೇತ ಹಾಲಿವುಡ್ ದಿಗ್ಗಜ "ಗುಡ್ ಫೆಲ್ಲಾಸ್', "ದ ರೇಜಿಂಗ್ ಬುಲ್', "ವೂಲ್ಫ್ ಆಫ್ ವಾಲ್ಸ್ಟ್ರೀಟ್' ಸೇರಿ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಮಾರ್ಟಿನ್ ಸ್ಕಾರ್ಸಿಸ್ ಜತೆಯಾಗಿದ್ದಾರೆ.
ಕಾರ್ಯಕಾರಿ ನಿರ್ಮಾಪಕನಾಗಿ ಚಿತ್ರತಂಡ ಸೇರಿಕೊಂಡಿರುವ ಅವರು, "2015ರಲ್ಲಿ ನೀರಜ್ ಅವರ "ಮಸಾನ್' ಸಿನಿಮಾ ವೀಸಿದ್ದೆ. ನನಗೆ ಬಹಳ ಇಷ್ಟವಾಗಿತ್ತು. "ಹೋಮ್ಬೌಂಡ್' ನನ್ನ ಬಳಿ ಬಂದಾಗ ಕುತೂಹಲವಿತ್ತು. ಪ್ರಾಜೆಕ್ಟ್ ನೋಡಿ ಖುಷಿಯಾಯಿತು. ಹೀಗಾಗಿಯೇ ತಂಡಕ್ಕೆ ಸಹಾಯಹಸ್ತ ಚಾಚಲು ಮುಂದಾದೆ. ಭಾರತೀಯ ಚಿತ್ರರಂಗಕ್ಕೆ ಉತ್ತಮ ಕೊಡುಗೆ ಆಗಬಲ್ಲ ಸುಂದರ ಚಿತ್ರವನ್ನು ನೀರಜ್ ಮಾಡಿದ್ದಾರೆ. ಕಾನ್ ಚಿತ್ರೋತ್ಸವಕ್ಕೂ ಸಿನಿಮಾ ಆಯ್ಕೆಯಾಗಿರುವುದು ಖುಷಿ ನೀಡಿದೆ' ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಿರ್ದೇಶಕ ನೀರಜ್, "ಮಾರ್ಟಿನ್ ಅವರಂತಹ ಐಕಾನ್ ನಮ್ಮ ತಂಡದ ಜತೆ ನಿಂತಿರುವುದು ಹೆಮ್ಮೆಯ ವಿಷಯ. ಅಪಾರ ಅನುಭವವಿರುವ ಅವರು ಚಿತ್ರಕಥೆ ಮತ್ತು ಸಂಕಲನದ ವೇಳೆ ನಮಗೆ ಮಾರ್ಗದರ್ಶನ ನೀಡಿದ್ದಾರೆ' ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.