

ಚಿತ್ರ: ಮಾರ್ಟಿನ್
ನಿರ್ದೇಶನ: ಎ.ಪಿ. ಅರ್ಜುನ್
ನಿರ್ಮಾಣ: ಉದಯ್ ಮೆಹ್ತಾ
ತಾರಾಗಣ: ಧ್ರುವ ಸರ್ಜಾ, ವೈಭವಿ ಶಾಂಡಿಲ್ಯಾ, ಅನ್ವೇಶಿ ಜೈನ್, ನಿಕಿತಿನ್ ಧೀರ್, ನವಾಬ್ ಶಾ, ರೋಹಿತ್ ಪಾಠಕ್, ಚಿಕ್ಕಣ್ಣ, ಸುಕೃತಾ ವಾಗ್ಲೆ ಮುಂತಾದವರು.
ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ (ಧ್ರುವ) ಬಂಧಿತನಾಗುತ್ತಾನೆ. ಆತ ಭಾರತೀಯ ಎಂಬುದನ್ನು ಬಿಟ್ಟರೆ ಬೇರೇನೂ ಮಾಹಿತಿ ಇರುವುದಿಲ್ಲ. ಆತನನ್ನೂ ಸೇರಿಸಿ! ಹತ್ತಾನೆಗಳ ಬಲವಿರುವ ಅವನನ್ನು ಪಳಗಿಸಲು ಜೈಲಿನಲ್ಲಿರುವ ಯಾರಿಗೂ ಆಗುವುದಿಲ್ಲ. ತನ್ನ ವಿಷಯಕ್ಕೆ ಬಂದವರನ್ನು ಹಿಡಿದು, ಬಡಿಯುವ, ತಾನು ಯಾರು ಎಂಬುದನ್ನೇ ಮರೆತಿರುವ ಆ ಆಗಂತುಕ, ‘ಹೂ ಆಮ್ ಐ?’ ಅಂತ ತಿಳಿದುಕೊಳ್ಳಲು ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ. ಅದೇ ಸಮಯದಲ್ಲಿ ಆತನನ್ನು ಹೋಲುವ ಭಾರತದ ಕಸ್ಟಮ್ಸ್ ಅಧಿಕಾರಿ ಅರ್ಜುನ್ (ಧ್ರುವ) ಕೂಡ ಪಾಕಿಸ್ತಾನದಲ್ಲಿರುತ್ತಾನೆ. ಆತನೂ ಈ ಅನಾಮಿಕನ ಹುಡುಕಾಟದಲ್ಲಿರುತ್ತಾನೆ. ಪಾಕಿಸ್ತಾನದ ಇಸ್ಲಾಮಾಬಾದ್ ಜೈಲಿನಲ್ಲಿ ಪ್ರಾರಂಭವಾಗುವ ಈ ಹುಡುಕಾಟ ನ್ಯೂ ಯಾರ್ಕ್, ಮುಂಬೈ, ಬೆಂಗಳೂರು, ಮಂಗಳೂರು ಸೇರಿ ಹಲವೆಡೆ ಸಾಗುತ್ತದೆ. ಹಾಗಾದರೆ ಅರ್ಜುನ್ಗೂ ಜೈಲಿನಿಂದ ತಪ್ಪಿಸಿಕೊಳ್ಳುವ ವ್ಯಕ್ತಿಗೂ ಏನು ಸಂಬಂಧ? ಇಬ್ಬರ ನಡುವೆ ಗೆಳೆತನವೋ? ಹಗೆತನವೋ? ಇದೆಲ್ಲದರ ನಡುವೆ ಮಾರ್ಟಿನ್ ಯಾರು? ತಿಳಿಯಲು ಸಿನಿಮಾ ನೋಡಿ...
ಉಗ್ರರ ವಿರುದ್ಧದ ಹೋರಾಟ, ದೇಶಪ್ರೇಮ, ಪ್ರೀತಿ, ಗೆಳೆತನ, ಮೆಡಿಸಿನ್ ಮಾಫಿಯಾ ಜತೆಗೆ ‘ಅದ್ದೂರಿ’ ಮೇಕಿಂಗ್, ‘ಭರ್ಜರಿ’ ಚೇಸಿಂಗ್, ‘ಬಹದ್ದೂರ್’ ಆಕ್ಷನ್, ಡಬಲ್ ಶೇಡ್ನಲ್ಲಿ ಧ್ರುವನ ಅದೇ ‘ಪೊಗರಿ’ನ ಹವಾ ಚಿತ್ರದಲ್ಲಿದೆ. ವೇಗವಾಗಿ ಸಾಗುವ ಕಥೆ, ಟರ್ನ್ ಮತ್ತು ಟ್ವಿಸ್ಟ್ಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಯತ್ನಿಸಿದರೂ, ಚಿತ್ರದಲ್ಲಿ ಏನೋ ಕೊರತೆ ಇದೆ ಎಂದು ಅನ್ನಿಸದೇ ಇರದು. ಏಕೆಂದರೆ ಅದೆಲ್ಲವನ್ನು ನೋಡಿಸಿಕೊಂಡು ಹೋಗುವ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಗಟ್ಟಿತನ ‘ಮಾರ್ಟಿನ್’ನಲ್ಲಿಲ್ಲ. ಢಂ ಢಂ ಢಮಾರ್ ಆಕ್ಷನ್ ಸದ್ದಿನ ನಡುವೆ, ‘ಜೀವ ನೀನೆ’ ಹಾಡು ನೋಡಲು ಅಂದ, ಕೇಳಲು ಚಂದ. ಧ್ರುವ ಅಭಿಮಾನಿಗಳಿಗೆ, ಥಿಯೇಟರ್ ಅನುಭವ ಬೇಕು ಅನ್ನೋರಿಗೆ ಮತ್ತು ಆಕ್ಷನ್ ಪ್ರಿಯರಿಗೆ ‘ಮಾರ್ಟಿನ್’ ಇಷ್ಟವಾಗಬಹುದು. ಆದರೆ, ಕಂಟೆಂಟ್ ಬಗ್ಗೆ ತುಂಬ ನಿರೀಕ್ಷೆಗಳನ್ನಿಟ್ಟು ಕೊಂಡು ಥಿಯೇಟರ್ಗೆ ಹೋದರೆ, ಕಷ್ಟವಾಗಬಹುದು!
‘ಮಾರ್ಟಿನ್’ ಕೂಡ ‘ಕೆಜಿಎಫ್’, ‘ಕಾಂತಾರ’ದಂತಹ ಮ್ಯಾಜಿಕ್ ಮಾಡಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಸ್ಟಾರ್ ಚಿತ್ರಗಳಲ್ಲಿ, ಕನ್ನಡ ಸಿನಿಮಾಗಳು ಥಿಯೇಟರ್ಗಳಲ್ಲಿ ನಿಲ್ಲುತ್ತಿಲ್ಲ ಎಂಬ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿರುವ ಇಡೀ ಕನ್ನಡ ಚಿತ್ರರಂಗವೇ ಈ ಸಿನಿಮಾಗಾಗಿ ಎದುರು ನೋಡುತ್ತಿತ್ತು. ಇಂತಹ ದುಸ್ಥಿತಿಯಲ್ಲಿ ಕನ್ನಡದ ಅತಿ ದೊಡ್ಡ ಬಜೆಟ್ ಚಿತ್ರಗಳ ಸಾಲಿನಲ್ಲಿ ನಿಲ್ಲುವ, 13 ಭಾಷೆಗಳಲ್ಲಿ ಮೂಡಿಬಂದಿರುವ ಕನ್ನಡ ಸಿನಿಮಾ ಎಂಬ ಕುತೂಹಲಕ್ಕಾದರೂ ಒಮ್ಮೆ ‘ಮಾರ್ಟಿನ್’ ನೋಡಲಡ್ಡಿಯಿಲ್ಲ.