ಆಂಧ್ರಲ್ಲಿ ಅಮಾನುಷ ಘಟನೆ.. ಪತಿಯನ್ನು ಥಳಿಸಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ!

Rape1
Published on

ಅಮರಾವತಿ: ಕೋಲ್ಕತ್ತಾದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಘಟನೆ ಮಾಸುವ ಮುನ್ನವೇ ಆಂಧ್ರಪ್ರದೇಶದಲ್ಲಿ ಅಂತಹುದೇ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಕೂಲಿ ಅರಸಿ ಬಂದಿದ್ದ ಪತಿ-ಪತ್ನಿ ಮೇಲೆ ದೌರ್ಜನ್ಯ ಎಸಗಿದ ಮೂವರು ದುಷ್ಕರ್ಮಿಗಳು ಪತಿಯನ್ನು ಥಳಿಸಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಅತ್ಯಾಚಾರ ಎಸಗಿದ ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದು, ನೂತಿಪಲ್ಲಿ ಪವನ್, ಲಂಬಾಡಿಪಲ್ಲಿ ನಾಗೇಂದ್ರ ನರಪತಿ ಮತ್ತು ಎಂ.ಆರ್. ಕಾಲೋನಿಯ ಗಡ್ಡಿ ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ.

ಹೊಟ್ಟೆಪಾಡಿಗಾಗಿ ದಂಪತಿ ಆಂಧ್ರದ ಏಲೂರಿಗೆ ಬಂದಿದ್ದರು. ಪತಿ - ಪತ್ನಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬಾಡಿಗೆ ಕಟ್ಟಲು ಸಾಧ್ಯವಾಗದ ಕಾರಣ ಸ್ಥಳೀಯ ಹಳೆಯ ಕಟ್ಟಡದಲ್ಲಿ ರಾತ್ರಿ ಮಲಗುತ್ತಿದ್ದರು. ಇದನ್ನು ಗಮನಿಸಿದ ಮೂವರು ಯುವಕರು ಪರಿಚಯ ಮಾಡಿಕೊಂಡಿದ್ದಾರೆ.

ಆ.16 ಶುಕ್ರವಾರ ರಾತ್ರಿ ಪತಿಗೆ ಮಧ್ಯ ನೀಡಿದ್ದಾರೆ. ಆತ ನಿದ್ರೆಗೆ ಜಾರುತ್ತಿದ್ದಂತೆ ಪತ್ನಿಬಳಿ ಬಂದು ದೈಹಿಕವಾಗಿ ಸಹಕರಿಸಲು ಒತ್ತಾಯಿಸಿದ್ದಾರೆ. ಆಗ ಆಕೆ ಒಪ್ಪದಿದ್ದಾಗ ಹಲ್ಲೆ ನಡೆಸಿದ್ದಾರೆ. ಇದರಿಂದ ಎಚ್ಚರವಾದ ಪತಿ ಜೋರಾಗಿ ಕಿರುಚಿಕೊಂಡಿದ್ದಾನೆ. ಆದರೆ ಆತನನ್ನು ಹಿಡಿದು ಥಳಿಸಿ, ಕೈಕಾಲು ಕಟ್ಟಿಹಾಕಿ ಆತನ ಎದುರೇ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಕಡೆಗೆ ಆತ ತಪ್ಪಿಸಿಕೊಂಡು ರಸ್ತೆಗೆ ಹೋಗಿ ಸಹಾಯ ಕೇಳಿದ್ದಾನೆ. ಇದನ್ನು ಗಮನಿಸಿದ ಮತ್ತೊಂದು ಯುವಕರ ತಂಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಮುಕರು ಅಲ್ಲಿಂದ ಓಡಿ ಹೋಗಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯನ್ನು ಏಲೂರು ಜಿಜಿಎಚ್‌ಗೆ ಸ್ಥಳಾಂತರಿಸಲಾಗಿದೆ. ಆಕೆಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net