

ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಕುರಿತು ಪರ-ವಿರೋಧದ ಬಿರುಸಿನ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಪ್ರಾಪ್ತ ವಯಸ್ಕರು ಇಷ್ಟಪಟ್ಟ ವ್ಯಕ್ತಿಯನ್ನು ಮದುವೆಯಾಗುವುದು ಅವರ ಮೂಲಭೂತ ಹಕ್ಕು. ಆ ಸ್ವಾತಂತ್ರ್ಯವನ್ನು ಯಾವುದೇ ಜಾತಿ, ಧರ್ಮದ ಹೆಸರಿನಲ್ಲಿ ಕಸಿದುಕೊಳ್ಳಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರೀತಿಸುತ್ತಿರುವ ಯುವತಿಯನ್ನು ಅಕ್ರಮ ಬಂಧನದಲ್ಲಿರಿಸಿದ್ದು, ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಅನ್ಯಧರ್ಮದ ಯುವಕನೊಬ್ಬ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್. ಸುಜಾತಾ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಯುವತಿಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ಮಾನ್ಯತಾ ಟೆಕ್ಪಾರ್ಕ್ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಒಂದು ವರ್ಷದ ಹಿಂದೆ ಪತಿಯಿಂದ ವಿಚ್ಛೇದನ ಪಡೆದು, ಚಂದ್ರಾಲೇಔಟ್ನಲ್ಲಿ ಪಾಲಕರ ಜತೆ ನೆಲೆಸಿದ್ದಳು. ಈ ನಡುವೆ ಸಹೋದ್ಯೋಗಿ ಜತೆ ಪ್ರೇಮಾಂಕುರವಾಗಿತ್ತು. ಆತನನ್ನು ಮದುವೆಯಾಗುವ ವಿಚಾರವನ್ನು ಪಾಲಕರ ಮುಂದೆ ಪ್ರಸ್ತಾಪಿಸಿದಾಗ ಪಾಲಕರು ಒಪ್ಪಿರಲಿಲ್ಲ ಎನ್ನಲಾಗಿದೆ. ಯುವಕನ ಮನವಿಯಂತೆ ಯುವತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಚಂದ್ರಾಲೇಔಟ್ ಠಾಣೆ ಪೊಲೀಸರಿಗೆ ಕೋರ್ಟ್ ನಿರ್ದೇಶಿಸಿತ್ತು. ಕೋರ್ಟ್ ನಿರ್ದೇಶನದಂತೆ ಯುವತಿ ಯನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ಯುವತಿ, ಅನ್ಯ ಧರ್ಮಕ್ಕೆ ಸೇರಿದವನೆಂಬ ಕಾರಣದಿಂದ ಪ್ರೀತಿಸಿದವರ ಜತೆ ಮದುವೆಗೆ ನನ್ನ ಪಾಲಕರು ಸಮ್ಮತಿ ನೀಡುತ್ತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದಳು.