

ಬೆಂಗಳೂರು: ಆನ್‌ಲೈನ್ ಗೇಮ್ ಪಬ್ಜಿನಿಂದ ಪರಿಚಿತಳಾದ ಅಪ್ರಾಪ್ತೆಗೆ ಮದುವೆ ಆಮಿಷವೊಡ್ಡಿ ದೈಹಿಕ ಸಂಪರ್ಕ ಬೆಳೆಸಿದ್ದ ಅಪರಾಧಿಗೆ 20 ವರ್ಷ ಜೈಲು, 20 ಸಾವಿರ ರೂ. ದಂಡ ವಿಧಿಸಿ ಎಫ್ ಟಿಎಸ್ ಸಿ 3ನೇ ನ್ಯಾಯಾಲಯ ತೀರ್ಪು ನೀಡಿದೆ.
ತಮಿಳುನಾಡಿನ ಅರಕೋಣಂ ನಿವಾಸಿ ಅಲೆಕ್ಸಾಂಡರ್ ಜೋರೋಮನ್ ಅಪರಾಧಿ. ನ್ಯಾಯಾಧೀಶರಾದ ಇಷ್ರತ್ ಜಹಾನ್ ಅರ ತೀರ್ಪು ನೀಡಿದ್ದಾರೆ. ಬಾಲಕಿಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ, ಸಂತ್ರಸ್ತೆ ಪರ ವಾದ ಮಂಡಿಸಿದ್ದರು.
ವಿ.ವಿ. ಪುರನಲ್ಲಿ ಪಾಲಕರ ಜೊತೆಯಲ್ಲಿ ನೆಲೆಸಿದ್ದ ಸಂತ್ರಸ್ತೆ, 2020ರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಳು. ಈ ವೇಳೆ ಪಬ್ಜಿ ಆನ್‌ಲೈನ್ ಗೇಮ್‌ನಲ್ಲಿ ಅಲೆಕ್ಸಾಂಡರ್ ಪರಿಚಯ ಆಗಿದ್ದು, ಸ್ನೇಹ ಬೆಳೆದು ನಿರಂತರವಾಗಿ ಸಂಪರ್ಕದಲ್ಲಿದ್ದ. ಸಂತ್ರಸ್ತೆಯ ವೈಯಕ್ತಿಕ ಮತ್ತು ಪಾಲಕರ ಮಾಹಿತಿ ಪಡೆದು ಪ್ರೀತಿಸುವಂತೆ ಪೀಡಿಸುತ್ತಿದ್ದ.
ಅಲ್ಲದೆ, ಮನೆಯಲ್ಲಿ ಕೌಟುಂಬಿಕ ಕಲಹ ಇರುವ ವಿಚಾರ ತಿಳಿದು 2022ರಲ್ಲಿ ಮದುವೆ ಆಗುವುದಾಗಿ ಹೇಳಿ ಚೆನ್ನೈಗೆ ಬರುವಂತೆ ಸಲಹೆ ಕೊಟ್ಟಿದ್ದ. ನಂಬಿದ ಬಾಲಕಿ, ಬೆಂಗಳೂರಿನಿಂದ ಬಸ್‌ನಲ್ಲಿ ಚೆನ್ನೈಗೆ ಹೋದಾಗ ಅಲ್ಲಿಗೆ ಅಲೆಕ್ಸಾಂಡರ್ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದ. ಮತ್ತೊಂದೆಡೆ ಮಗಳು ಕಾಣಿಯಾಗಿರುವ ಬಗ್ಗೆ ಪಾಲಕರು, ವಿ.ವಿ. ಪುರ ಠಾಣೆಗೆ ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಅಲೆಕ್ಸಾಂಡರ್‌ನನ್ನು ಬಂಧಿಸಿ ಬಾಲಕಿಯನ್ನು ರಕ್ಷಣೆ ಮಾಡಿ ಪಾಲಕರಿಗೆ ಒಪ್ಪಿಸಿದ್ದರು. ಈತನ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.