

ಭೋಪಾಲ್: ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯವಾಗಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಅಂತರ್ ಧರ್ಮೀಯ ವಿವಾಹವನ್ನು ನೋಂದಾಯಿಸಲು ಪೊಲೀಸ್ ರಕ್ಷಣೆಗಾಗಿ ಸಲ್ಲಿಸಲಾದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರಿದ್ದ ಪೀಠವು, ವಿಶೇಷ ವಿವಾಹ ಕಾಯಿದೆ 1954ರ ಅಡಿಯಲ್ಲಿ ವಿವಾಹವಾಗಿದ್ದರೂ ಸಹ ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವನ್ನು ಮುಸ್ಲಿಂ ಕಾನೂನಿನ ಅಡಿಯಲ್ಲಿ ಅಮಾನ್ಯವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.
ನ್ಯಾಯಾಲಯ ಸೋಮಾವಾರ (ಮೇ 27)ದಂದು ನೀಡಿದ್ದ ತನ್ನ ಆದೇಶದಲ್ಲಿ, ಮಹಮದೀಯ ಕಾನೂನಿನ ಪ್ರಕಾರ "ವಿಗ್ರಹಾರಾಧಕ ಅಥವಾ ಅಗ್ನಿ ಪೂಜಕ ಹುಡುಗಿಯೊಂದಿಗೆ ಮುಸ್ಲಿಂ ಹುಡುಗನ ವಿವಾಹವು ಮಾನ್ಯವಲ್ಲ, ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ವಿವಾಹವನ್ನು ನೋಂದಾಯಿಸಿದರೂ ಇದು ಅನಿಯಮಿತ (ಫಾಸಿದ್) ಮದುವೆಯಾಗಿದೆ" ಎಂದು ಹೇಳಿದೆ. ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆ ದಂಪತಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಮಹಿಳೆ ಮನೆಯವರು ಅಂತರ್ ಧರ್ಮೀಯ ಸಂಬಂಧವನ್ನು ವಿರೋಧಿಸಿದ್ದರು. ಅಂತರ್ ಧರ್ಮೀಯ ವಿವಾಹ ನಡೆದರೆ ಸಮಾಜದಲ್ಲಿ ಬಹಿಷ್ಕಾರ ಹಾಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಈ ಜೋಡಿ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ಬಯಸಿದ್ದರು. ಮಹಿಳೆ ಅಥವಾ ಪುರುಷ ಮದುವೆಗಾಗಿ ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ಬಯಸುವುದಿಲ್ಲ. ಮಹಿಳೆ ಹಿಂದೂ ಧರ್ಮವನ್ನು ಮುಂದುವರಿಸುತ್ತಾಳೆ, ಆದರೆ ಪುರುಷನು ಮದುವೆಯ ನಂತರವೂ ಇಸ್ಲಾಂ ಧರ್ಮವನ್ನು ಮುಂದುವರಿಸುತ್ತಾನೆ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ವಿವಾಹ ಅಧಿಕಾರಿಯ ಮುಂದೆ ಹಾಜರಾಗಿ ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ನೋಂದಣಿ ಮಾಡಿಸಲು ದಂಪತಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಅವರು ವಾದಿಸಿದರು. ವೈಯಕ್ತಿಕ ಕಾನೂನಿನಡಿಯಲ್ಲಿ ಅಂತರ್-ಧರ್ಮೀಯ ವಿವಾಹವನ್ನು ನಿಷೇಧಿಸಲಾಗಿದ್ದರೂ, ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮಾನ್ಯವಾಗಿರುತ್ತದೆ ಎಂದು ವಕೀಲರು ಹೇಳಿದರು.
ವಿಶೇಷ ವಿವಾಹ ಕಾಯ್ದೆಯಡಿ ವಿವಾಹವನ್ನು ಧಾರ್ಮಿಕ ವಿಧಿಗಳನ್ನು ಮಾಡದಿದ್ದಕ್ಕಾಗಿ ಪ್ರಶ್ನಿಸಲಾಗದಿದ್ದರೂ, ವೈಯಕ್ತಿಕ ಕಾನೂನಿನ ಅಡಿಯಲ್ಲಿ ಅದನ್ನು ನಿಷೇಧಿಸಿದರೆ ಅಂತಹ ವಿವಾಹವು ಮಾನ್ಯವಾದ ವಿವಾಹವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.