

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಜಾಲ ಸಿಸಿಬಿ ಬಲೆಗೆ ಬಿದ್ದಿದೆ. 10 ರಿಂದ 15 ಸಾವಿರ ರೂ. ಪಡೆದು ಮಾಕ್ಸ್‌ಕಾರ್ಡ್ ವಿತರಣೆ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ.
ಧಾರವಾಡದ ಪ್ರಶಾಂತ್ ಗುಂಡುಮಿ (41), ಬನಶಂಕರಿ 3ನೇ ಹಂತ ಶ್ರೀನಿವಾಸನಗರದ ಕೆ.ಜೆ. ಮೋನಿಷ್ (26) ಮತ್ತು ಗದಗ ಜಿಲ್ಲೆಯ ಲಕ್ಷ್ಮೀಶ್ವರ ಸಿಟಿಯ ಎಚ್. ರಾಜಶೇಖರ್ ಬಳ್ಳಾರಿ (41) ಬಂಧಿತರು. ಹೆಚ್ಚಿನ ಹಣ ಸಂಪಾದನೆ ದುರುದ್ದೇಶದಿಂದ ದೂರ ಶಿಕ್ಷಣ ಮೂಲಕ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಗೆ ದಾಖಲಾಗುವ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ಅಂಕಪಟ್ಟಿ ನೀಡುತ್ತಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯಿಂದ 10ರಿಂದ 15 ಸಾವಿರ ರೂ. ಪಡೆಯುತ್ತಿದ್ದರು. 2017ರಿಂದ 350ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ಆರೋಪಿಗಳು ವಿತರಣೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ?
ಕತ್ರಿಗುಪ್ಪೆ ಮುಖ್ಯರಸ್ತೆಯ ರಾಮ್‌ರಾವ್ ಲೇಔಟ್‌ನಲ್ಲಿ ಇರುವ ಅಕಾಡೆಮಿ ಮಾಲೀಕರನ್ನು ಭೇಟಿ ಮಾಡಿದ ದೂರುದಾರರ ತಮ್ಮ, ಅಣ್ಣನ ಮಗನನ್ನು ದೂರ ಶಿಕ್ಷಣದ ಮೂಲಕ ಪಿಯುಸಿಗೆ ದಾಖಲು ಮಾಡಿಸಿದ್ದರು. ಕೆಲವೇ ದಿನಗಳಲ್ಲಿ ಈತನಿಗೆ ಯಾವುದೇ ಪರೀಕ್ಷೆ ಬರೆಸದೆ ‘ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ’ ಎಂಬ ಸಂಸ್ಥೆಯ ಹೆಸರಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ಅಂಕಪಟ್ಟಿ ನೀಡಲಾಗಿತ್ತು. ಅಂಕಪಟ್ಟಿಯನ್ನು ಪರಿಶೀಲನೆ ಮಾಡಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ
ಸಿಸಿಬಿಯ ಆರ್ಥಿಕ ಅಪರಾಧ ದಳಕ್ಕೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಬನಶಂಕರಿಯ ಅಕಾಡೆಮಿ ಮೇಲೆ ದಾಳಿ ನಡೆಸಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೂವರು ಆರೋಪಿಗಳ ಸುಳಿವು ಲಭ್ಯವಾಯಿತು.
ಅಕಾಡೆಮಿ ವತಿಯಿಂದ ಕಳಿಸುವ ದಾಖಲಾತಿಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಹೆಸರಿಗೆ 10 ಮತ್ತು 12ನೇ ತರಗತಿಯ ನಕಲಿ ಅಂಕಪಟ್ಟಿ ಸೃಷ್ಟಿಸಿ ಕೊಡುತ್ತಿದ್ದ ವಿಷಯ ಬಹಿರಂಗವಾಗಿದೆ. ತನಿಖೆ ಕೈಗೊಂಡ ಸಿಸಿಬಿ ಪೊಲೀಸರು, ಅಲ್ಲಿಂದ ಆರೋಪಿಗಳ ಶ್ರೀನಗರದ ಕಚೇರಿ ಮೇಲೆ ದಾಳಿ ನಡೆಸಿದಾಗ, 1 ಅಸಲಿ ಪಿಯುಸಿ ಅಂಕಪಟ್ಟಿ, ಅಸಲಿ ಲೀವಿಂಗ್ ಸರ್ಟಿಫಿಕೇಟ್, ಪ್ರಾವಿಷನಲ್ ಮಾರ್ಕ್ಸ ಕಾರ್ಡ್, ಹಾಲ್ ಟಿಕೆಟ್‌ಗಳು ಪತ್ತೆಯಾಗಿದ್ದವು. ಇದಾದ ಮೇಲೆ ಪೊಲೀಸರು ಆರೋಪಿ ಪ್ರಶಾಂತ್‌ನನ್ನು ಶ್ರೀನಗರದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಪ್ಪೊಪ್ಪಿಕೊಂಡಿದ್ದಾರೆ. ಈತ ಕೊಟ್ಟ ಸುಳುವಿನ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳ ಮೊಬೈಲ್ ಪರಿಶೀಲಿಸಿದಾಗ, 350ಕ್ಕೂ ಹೆಚ್ಚು ನಕಲಿ ಅಂಕಪಟ್ಟಿ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಬಿ. ದಯಾನಂದ್ ವಿವರಿಸಿದ್ದಾರೆ.
ನೈಜತೆ ಪರಿಶೀಲನೆಗೆ ಪತ್ರ
ಬಂಧಿತರಿಂದ ಪಡೆದಿದ್ದ ಅಂಕಪಟ್ಟಿ ಬಳಸಿ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿ ಸವಲತ್ತು ಪಡೆದಿದ್ದರು. ಇವುಗಳ ಅಸಲಿತನ ಪರೀಕ್ಷೆ ನಡೆಸುವ ಉದ್ದೇಶಕ್ಕೆ ಆಯಾ ಕಂಪನಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳ ಅಂಕಪಟ್ಟಿಗಳ ನೈಜತೆಯ ಪರಿಶೀಲನೆಗೆ ಅಕಾಡೆಮಿಗೆ ವರದಿ ಕೇಳಿ ಪತ್ರ ಬರೆದಿರುವ 50ಕ್ಕೂ ಹೆಚ್ಚು ದಾಖಲಾತಿಗಳು ಪತ್ತೆಯಾಗಿವೆ. ಅಲ್ಲದೆ, ಕಮಿಷನ್ ಆಸೆಗೆ ಅಕಾಡೆಮಿಯಲ್ಲಿ ಕೆಲಸ ಮಾಡುವ ನೌಕರರು ಸಹ ನಕಲಿ ಅಂಕಪಟ್ಟಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಎಲ್ಲೆಲ್ಲಿ ಬಳಕೆ?
ಬಂಧಿತರಿಂದ ಅಂಕಪಟ್ಟಿ ಪಡೆದಿರುವವರು ಆರ್‌ಟಿಒ ಕಚೇರಿಗೆ ಸಲ್ಲಿಸಿ ಚಾಲನಾ ಪರವಾನಗಿ ಪಡೆದಿದ್ದಾರೆ. ಶಿಶು ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಸಲ್ಲಿಸಿ ಅಂಗನವಾಡಿ ಶಿಕ್ಷಕ ವೃತ್ತಿಗೆ ಬಳಕೆ ಮತ್ತು ಖಾಸಗಿ ಕಂಪನಿಗಳಲ್ಲಿ ನೌಕರಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕ ತಿದ್ದುಪಡಿಗೆ ಬಳಕೆ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಅಕಾಡೆಮಿಗಳ ಮೂಲಕ ಗಾಳ
ಆರೋಪಿಗಳು 2017ರಿಂದ ‘ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ’ ಎಂಬ ವೆಬ್‌ಸೈಟ್ ತೆರೆದು ಅಧಿಕೃತ ಸಂಸ್ಥೆ ಎಂದು ಹೇಳಿಕೊಂಡಿದ್ದರು. ಗೂಗಲ್‌ನಲ್ಲಿ ಸಿಗುವ ದೂರ ಶಿಕ್ಷಣ ಅಕಾಡೆಮಿಗಳಿಗೆ ಕರೆ ಮಾಡಿ ಅಲ್ಲಿನ ಮುಖ್ಯಸ್ಥರನ್ನು ಸಂಪರ್ಕ ಮಾಡುತ್ತಿದ್ದರು. ನಿಮ್ಮ ಬಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶಿಕ್ಷಣಕ್ಕೆ ಬರುವವರಿಗೆ ಪರೀಕ್ಷೆ ಬರೆಯದೆ ಅಂಕಪಟ್ಟಿ ಕೊಡುತ್ತೇವೆ. ಅಂತಹವರ ಮೊಬೈಲ್ ಕೊಡಿ ಅಥವಾ ನೀವೇ ಅವರನ್ನು ಒಪ್ಪಿಸಿದರೆ ಅವರ ವಿವರ ಕೊಟ್ಟರೆ ಅಂಕಪಟ್ಟಿ ಕೊಡುವುದಾಗಿ ಆಮಿಷವೊಡ್ಡುತ್ತಿದ್ದರು. ಕೆಲವೊಂದು ಅಕಾಡೆಮಿಗಳು ತಾವೇ ವಿದ್ಯಾರ್ಥಿಗಳ ಬಳಿ ಡೀಲ್ ಕುದುರಿಸಿ ಹಣ ಪಡೆದು ಅಂಕಪಟ್ಟಿ ಕೊಡುತ್ತಿದ್ದರು. ಇನ್ನೂ ಕೆಲವರು ವಿದ್ಯಾರ್ಥಿಗಳ ಮೊಬೈಲ್ ನಂಬರ್ ಕೊಟ್ಟು ಹಣ ಪಡೆದು ಸುಮ್ಮನಾಗುತ್ತಿದ್ದರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.