ಮಹಿಳಾ ಸಂಘಗಳಿಗೆ ಮಾರುಕಟ್ಟೆ ವ್ಯವಸ್ಥೆ

sor deepavali
ದೀಪಾವಳಿ ಅಂಗವಾಗಿ ಸೊರಬದಲ್ಲಿ ಆಯೋಜಿಸಿದ್ದ ಮಹಿಳಾ ಸ್ವಸಹಾಯ ಸಂಘಗಳು ಉತ್ಪಾದಿಸುವ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಶಿಬಿರವನ್ನು ತಾಪಂ ಇಒ ಶಶಿಧರ್ ಉದ್ಘಾಟಿಸಿದರು.
Published on

ಸೊರಬ: ಸ್ವದೇಶಿ ವಸ್ತುಗಳ ತಯಾರಿಕೆಯನ್ನು ಉತ್ತೇಜಿಸಲು, ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಪಟ್ಟಣದಲ್ಲಿ ವೇದಿಕೆ ಕಲ್ಪಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಶಶಿಧರ್ ಹೇಳಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸಂಘಗಳು ಉತ್ಪಾದಿಸುವ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಮಹಿಳೆಯರು ಸಶಕ್ತ ಬದುಕು ಕಟ್ಟಿಕೊಳ್ಳಲು ನೆರವು ನೀಡುವ ದೃಷ್ಟಿಯಿಂದ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ದೇಶೀಯ ಕರಕುಶಲ ವಸ್ತುಗಳು, ಅಲಂಕಾರಿಕ ಮತ್ತು ಗೃಹೋಪಯೋಗಿ ವಸ್ತುಗಳಿಗೆ ಬೇಡಿಕೆ ಇದೆ. ಸ್ಥಳೀಯ ಜನರು ಬೇಡಿಕೆಗೆ ಅನುಗುಣವಾಗಿ ಖರೀದಿ ಮಾಡುವ ಮನಸ್ಸು ಮಾಡಿದರೆ ಸ್ವಸಹಾಯ ಗುಂಪುಗಳಿಗೆ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ನಿರ್ಮಾಣವಾಗಲಿದೆ. ಗ್ರಾಹಕರು ಸಹಕಾರ ನೀಡಿದರೆ ಪ್ರತ್ಯೇಕ ಮಾರಾಟ ಕೇಂದ್ರವಾಗಿ ಪರಿವರ್ತನೆ ಆಗುವ ಜತೆಗೆ ಮಹಿಳೆಯರ ಸ್ವಾವಲಂಬನೆಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಚಂದನ್ ಮಾತನಾಡಿ, ದೀಪ ಸಂಜೀವಿನಿ ಕಾರ್ಯಕ್ರಮದಡಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡಲಾಗುತ್ತಿದೆ. ಭಾರತದ ಅರ್ಥಿಕತೆ ಗಟ್ಟಿಗೊಳಿಸಲು ಸ್ವಸಹಾಯ ಸಂಘಗಳ ವಸ್ತುಗಳಿಗೂ ಬೇಡಿಕೆ ಇರುವುದರಿಂದ ತಾಪಂ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.

ಚಂದ್ರಗುತ್ತಿ ಗ್ರಾಮ ಪಂಚಾಯಿತಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಕಲ್ಪನಾ ಮಾತನಾಡಿ, ಗೃಹಾಲಂಕರ, ದೀಪಾಲಂಕಾರ ಹಾಗೂ ದಿನಬಳಕೆ ವಸ್ತುಗಳಿಗೆ ದೀಪಾವಳಿ ಹಬ್ಬದಲ್ಲಿ ಬಹು ಬೇಡಿಕೆ ಇರುವುದರಿಂದ ಗ್ರಾಪಂ ಮಟ್ಟದಲ್ಲಿ ಉತ್ಪಾದಿಸಲಾಗುತ್ತಿದೆ. ಸಂಜೀವಿನಿ ಯೋಜನೆಗಳಿಂದ ಮಹಿಳೆಯರು ಆರ್ಥಿಕ ಲಾಭ ಹೊಂದುವ ಜತೆಗೆ ಜೀವನ ಸುಧಾರಣೆ ಕಂಡಿದ್ದಾರೆ. ಮುಖ್ಯವಾಗಿ ಕುಟುಂಬದ ನಿರ್ವಹಣೆ ಸುಲಭವಾಗಿದೆ. ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಕ್ಕೂ ಅವಕಾಶವಿದೆ ಎಂದು ಹೇಳಿದರು.

ತಾಲೂಕಿನ ಗುಡವಿ, ತತ್ತೂರು, ಉದ್ರಿ, ಉಳವಿ, ಮುಟುಗುಪ್ಪೆ, ಚಂದ್ರಗುತ್ತಿ, ಮಾವಲಿ, ಕುಪ್ಪಗಡ್ಡೆ ಪಂಚಾಯಿತಿ ವ್ಯಾಪ್ತಿಯ ಸ್ವಸಹಾಯ ಗುಂಪುಗಳ ಸದಸ್ಯರಿಂದ ವಸ್ತು ಪ್ರದರ್ಶನ ಹಾಗೂ ಮಾರಾಟ ನಡೆಯಿತು.

ಕಾರ್ಯಕ್ರಮದ ವ್ಯವಸ್ಥಾಪಕ ಹರೀಶ್, ಚೌಡಪ್ಪ, ಶಶಿಕಲಾ, ಸದಸ್ಯರಾದ ಶಕುಂತಲಾ, ಗೌರಮ್ಮ ಗೀತಾ, ಚೈತ್ರಾ, ಗಂಗಮ್ಮ, ಲಲಿತಾ, ಭಾಗೀರಥಿ, ಶೋಭಾ ಪ್ರಮೋದಿನಿ, ತೇಜಸ್ವಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net