

ಶಿರಾಳಕೊಪ್ಪ: ರಾಜ್ಯದ ಪ್ರತಿಷ್ಠಿತ ಜಾನುವಾರು ಸಂತೆಗಳಲ್ಲಿ ಒಂದಾಗಿದ್ದ ಶಿರಾಳಕೊಪ್ಪದ ಜಾನುವಾರು ಮಾರುಕಟ್ಟೆ (ದನದ ಪೇಟೆ) ಇದೀಗ ತನ್ನ ವೈಭವ ಕಳೆದುಕೊಂಡಿದೆ. ಜತೆಗೆ ಇದನ್ನೇ ನಂಬಿಕೊಂಡಿದ್ದ ಹಲವರ ಆದಾಯಕ್ಕೂ ಕತ್ತರಿ ಬಿದ್ದಿದೆ.
ಶಿರಾಳಕೊಪ್ಪ ಜಾನುವಾರುಗಳ ಸಂತೆಯಲ್ಲಿ ಎತ್ತುಗಳನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿತ್ತು. 1970ರಿಂದಲೂ ಜಾನುವಾರು ವ್ಯಾಪಾರಕ್ಕೆ ಹೆಸರಾಗಿದ್ದ ಈ ಸಂತೆಯಲ್ಲಿ ಉತ್ತಮ ತಳಿಯ ಒಂದು ಜತೆ ಎತ್ತುಗಳ ದರ 800 ರೂ.ನಿಂದ 900 ರೂ. ಬೆಲೆ ಇತ್ತು ಎಂದು ಹಿರಿಯರು ಹೇಳುತ್ತಾರೆ. ಕ್ರಮೇಣ ಎತ್ತುಗಳ ದರ ಏರುತ್ತಲೇ ಸಾಗಿದೆ. ಸಂತೆಯಲ್ಲಿ ಅಮೃತ್ ಮಹಲ್ (ಡಾಗ್ ಎತ್ತು), ಹಳ್ಳಿಕಾರ್, ಜಾತಿ ಹೋರಿ, ಅಮರಾವತಿ, ಗೋಷಿ, ಕಗ್ಗ ಹೋರಿ ಸೇರಿ ವಿವಿಧ ತಳಿಯ ಜಾನುವಾರುಗಳ ವ್ಯಾಪಾರ ನಡೆಯುತ್ತಿತ್ತು. ಲಕ್ಷಾಂತರ ಜನರಿಗೆ ಬದುಕಿಗೆ ನೆರವಾಗಿತ್ತು ಈ ಸಂತೆ.
ಬಯಲು ಸೀಮೆ ಹಾಗೂ ಮಲೆನಾಡಿನ ಕೃಷಿ ಭೂಮಿಯಲ್ಲಿ ಉಳುಮೆ ಮಾಡಲು ಅಗತ್ಯವಿರುವ ಎತ್ತುಗಳು ಈ ಮಾರುಕಟ್ಟೆಯಲ್ಲಿ ಲಭಿಸುತ್ತಿದ್ದವು. ಪ್ರತಿವಾರ ಜಾತ್ರೆಯಂತೆ ವೈಭವದಿಂದ ಈ ಸಂತೆ ನಡೆಯುತ್ತಿತ್ತು. ಈ ಜಾನುವಾರು ಸಂತೆಯಿಂದಾಗಿ ಹೋಟೆಲ್ ಮಾಲೀಕರು, ಜಾನುವಾರು ಪರಿಕರಗಳ ಮಾರಾಟಗಾರರು, ದಲ್ಲಾಳಿಗಳು, ಹಮಾಲರು, ವಾಹನ ಮಾಲೀಕರು, ಕೃಷಿಕರು ಸೇರಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿದ್ದವು.
ದರ ನಿಗದಿಯ ವೈಶಿಷ್ಟೃ: ಎತ್ತಿನ ಸಂತೆಯಲ್ಲಿ ಬೃಹತ್ ಗಾತ್ರದ ಚಪ್ಪರ ಹಾಕಲಾಗುತ್ತಿತ್ತು. ಚಪ್ಪರದ ಮಧ್ಯದಲ್ಲಿ ಎತ್ತುಗಳನ್ನು ಕಟ್ಟಿ ಸುತ್ತಲು ಮೇವು ಜೋಡಿಸಿ ಮುಂದೆ ವ್ಯಾಪಾರಿಗಳು ಜಮಖಾನ ಹಾಸಿಕೊಂಡು ವ್ಯಾಪಾರದಲ್ಲಿ ತೊಡಗುತ್ತಿದ್ದರು. ಎತ್ತಿನ ಕೊರಳಿಗೆ ಕರಿ ಬಣ್ಣದ ದಂಡೆಯನ್ನು ಕಟ್ಟಿ ಕುರಿಯ ಕೋಡು ಹಾಗೂ ದೃಷ್ಟಿಕಾಯಿ ಕಟ್ಟುತ್ತಿದ್ದರು. ಖರೀದಿಸುವ ವ್ಯಕ್ತಿ ಹಾಗೂ ಮಾರುವ ವ್ಯಕ್ತಿ ಟವೆಲ್ ಕೆಳಗೆ ಕೈಹಾಕಿ, ಬೆರಳುಗಳನ್ನು ಮುಟ್ಟುವ ಮೂಲಕ ದರ ನಿಗದಿ ಮಾಡುತ್ತಿದ್ದರು.
ರಾಷ್ಟ್ರಾದ್ಯಂತ ಪಡೆದಿತ್ತು ಖ್ಯಾತಿ: ಈ ಜಾನುವಾರು ಸಂತೆ ಪ್ರತಿ ಭಾನುವಾರ, ಸೋಮವಾರ ನಡೆಯುತ್ತಿತ್ತು. ಜಿಲ್ಲೆ, ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ಖ್ಯಾತಿಗಳಿಸಿತ್ತು. ಹಾಸನ, ಗಂಡಸಿ, ಮಧುಗಿರಿ, ಚಿಂತಾಮಣಿ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಕೆ.ಆರ್.ಪೇಟೆ, ವಿಧುರಾಶ್ವತ್ಥ, ಆಂಧ್ರಪ್ರದೇಶದ ಹಿಂದುಪುರ, ಕೇರಳ ಮತ್ತಿತರ ರಾಜ್ಯಗಳಿಂದಲೂ ವ್ಯಾಪಾರಸ್ಥರು ನೂರಾರು ಎತ್ತುಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಕೊಂಡಿಯಾಗಿದ್ದ ಈ ದನದ ಸಂತೆ ಈ ಭಾಗದ ರೈತರ ಜೀವನಾಡಿಯಾತ್ತು. ಪಟ್ಟಣದ ಹದಯ ಭಾಗವಾಗಿದ್ದ ಗಾಂಧಿ ನಗರದ ಹತ್ತು ಎಕರೆ ಪ್ರದೇಶಲ್ಲಿ ದನದ ಸಂತೆ ನಡೆಯುತ್ತಿತ್ತು. ನಂತರ ಅದನ್ನು ಹಿರೇಕೆರೂರು ರಸ್ತೆಯ ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಆ ಬಳಿಕ ತಡಗಣಿ ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲಾಯಿತು.
ಆಧುನಿಕತೆ ತಂದ ಆಪತ್ತು: ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ಯಾಂತ್ರಿಕ ಕೃಷಿ ವ್ಯಾಪಕವಾಗುತ್ತಿದೆ. ಈ ಕಾರಣಕ್ಕೆ ಎತ್ತುಗಳ ಅವಶ್ಯಕತೆ ಕಡಿಮೆಯಾಗಿದೆ. ಇದರಿಂದಾಗಿ ಸಂತೆಯ ವೈಭವವೂ ಕ್ಷೀಣಗೊಂಡಿದೆ. ವೈಭವದ ಸಂತೆಯಲ್ಲೀಗ ವ್ಯಾಪಾರ ಸಂಪೂರ್ಣ ಕುಸಿದಿದೆ. ಸ್ಥಳೀಯ ಆಡಳಿತವು ಎತ್ತುಗಳನ್ನು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಇನ್ನುಮುಂದೆ ಇಲ್ಲಿಯೇ ಎತ್ತುಗಳ ಮಾರಾಟಕ್ಕೆ ಸಂತೆ ಆಯೋಜನೆ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹ.