

ಸಾಗರ: ನಗರದ ಮಾರಿಕಾಂಬಾ ದೇವಿಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೇ 1ರಿಂದ 3ರವರೆಗೆ ನಡೆಯಲಿದೆ ಎಂದು ಮಾರಿಕಾಂಬಾ ದೇಗುಲ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಹೇಳಿದರು.
ದೇವಸ್ಥಾನದಲ್ಲಿ ಶನಿವಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ವೇದಬ್ರಹ್ಮ ಹೃಷಿಕೇಶ ಬಾಯರಿ ಬಾರ್ಕೂರ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿವೆ ಎಂದರು.
ಬ್ರಹ್ಮ ಕಲಶೋತ್ಸವ ನಡೆಸುವ ಕುರಿತು ಸಮಿತಿಯಲ್ಲಿ ಚರ್ಚೆ ನಡೆಸಿದ್ದು, ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳು ಧಾರ್ಮಿಕ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇ 1ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದ್ದು, ಮೇ 2ರಂದು ಚಂಡಿಕಾ ಹೋಮ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಇರುತ್ತದೆ. 3ರಂದು ಬ್ರಹ್ಮಕಲಶೋತ್ಸವ, ಹೋಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ ಎಂದು ತಿಳಿಸಿದರು.
ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್ ಮಾತನಾಡಿ, ಪ್ರತಿ 12 ವರ್ಷಕ್ಕೊಮ್ಮೆ ಅಷ್ಟಬಂಧ ಧಾರ್ಮಿಕ ಕಾರ್ಯಕ್ರಮ ನಡೆಸಬೇಕು ಎಂದು ಶಾಸ್ತ್ರ ಹೇಳುತ್ತದೆ. ಆದರೆ ಕಳೆದ 42 ವರ್ಷಗಳಿಂದ ದೇವಸ್ಥಾನದಲ್ಲಿ ಅಷ್ಟಬಂಧ ನಡೆದಿಲ್ಲ. ಲೋಕಕಲ್ಯಾಣಾರ್ಥವಾಗಿ ಧಾರ್ಮಿಕ ಕಾರ್ಯಕ್ರಮ ನಡೆಸಬೇಕು ಎನ್ನುವ ಹಿರಿಯರ ಸಲಹೆ ಮೇರೆಗೆ ನಡೆಸಲಾಗುತ್ತಿದೆ. ಕಾರ್ಯಕ್ರಮಕ್ಕೆ 12 ಲಕ್ಷ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಮೂರು ದಿನಗಳ ಕಾಲ ವಿಶೇಷ ಪೂಜೆಗಳು ನಡೆಯಲಿದ್ದು, ಸುಮಾರು 80 ಜನ ಅರ್ಚಕರು ಪಾಲ್ಗೊಳ್ಳಲಿದ್ದಾರೆ ಎಂದರು
ಸುಂದರ ಸಿಂಗ್, ಗಂಗಾಧರ ಜಂಬಿಗೆ, ಜಯರಾಮ್, ಮಂಜು ಇತರರಿದ್ದರು.