ಬೇಡ್ತಿ-ವರದಾ ಯೋಜನೆ ವಿರೋಧಿಸಿ ಪಾದಯಾತ್ರೆ

swarnavalli sri
ಶಿವಮೊಗ್ಗದಲ್ಲಿ ಪರಿಸರಾಸಕ್ತರೊಂದಿಗೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಮಾಲೋಚನೆ ನಡೆಸಿದರು. ಎಂ.ಶಂಕರ್, ಬಾಲಕೃಷ್ಣ ನಾಯ್ಡು, ಡಾ. ಎಲ್.ಕೆ.ಶ್ರೀಪತಿ, ಮಹಿಮ ಪಟೇಲ್, ಎ.ಎನ್.ಪ್ರಕಾಶ್ ಇತರರಿದ್ದರು.
Published on

ಶಿವಮೊಗ್ಗ: ಪಶ್ಚಿಮಘಟ್ಟಕ್ಕೆ ಮಾರಕವಾದ ಯೋಜನೆಗಳನ್ನು ಕಾರ್ಯಗೊಳಿಸುವ ಸರ್ಕಾರದ ನಿರ್ಧಾರ ಖಂಡಿಸಿ ಮೂರು ಹಂತಗಳಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.

ನಗರದ ಶೃಂಗೇರಿ ಶಂಕರಮಠದಲ್ಲಿ ಪರ್ಯಾವರಣ ಟ್ರಸ್ಟ್, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಮತ್ತು ನಿರ್ಮಲ ತುಂಗಭದ್ರಾ ಅಭಿಯಾನದ ಪದಾಧಿಕಾರಿಗಳೊಡನೆ ಪಶ್ಚಿಮಘಟ್ಟಕ್ಕೆ ಹಾನಿಯಾಗುವ ಬೃಹತ್ ಯೋಜನೆಗಳಿಗೆ ಸಂಬಂಧಿಸಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಅ.19ಕ್ಕೆ ಬೇಡ್ತಿ ಯೋಜನೆ ವಿರೋಧಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನ.23ಕ್ಕೆ ಪರಿಸರ ತಜ್ಞರು, ಸಂಪನ್ಮೂಲ ವ್ಯಕ್ತಿಗಳು, ಸಮಾಜದ ವಿವಿಧ ಸ್ತರಗಳ ಗಣ್ಯರನ್ನು ಒಳಗೊಂಡಂತೆ ಶಿರಸಿಯಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗುವುದು. ಜನವರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಬೇಡ್ತಿ-ವರದಾ ನದಿ ಜೋಡಣೆ ಮಾಡಿ ಬಯಲುಸೀಮೆ ಪ್ರದೇಶಕ್ಕೆ ನೀರು ಕೊಂಡೊಯ್ಯುವ ಯೋಜನೆಯೊಂದು ಕಾರ್ಯಗತವಾಗಲು ಸಿದ್ಧವಾಗಿದೆ. ಅದೇ ರೀತಿ ಅಘನಾಶಿನಿ ನದಿ ನೀರನ್ನು ಚಿತ್ರದುರ್ಗ ವೇದಾವತಿ ನದಿಗೆ ಸೇರಿಸುವ ಪ್ರಸ್ತಾಪವೂ ಇದೆ. ಇದರ ಜತೆಗೆ ಶರಾವತಿ ಕೊಳ್ಳದಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಯ ಚರ್ಚೆ ಬಿರುಸಾಗಿದೆ. ಇವೆಲ್ಲವೂ ಪಶ್ಚಿಮ ಘಟ್ಟಕ್ಕೆ ಮಾರಕವಾದ ಯೋಜನೆಗಳು ಎಂಬುದರಲ್ಲಿ ಸಂದೇಹವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ ಎಂ.ಶಂಕರ್, ಪರಿಸರ ತಜ್ಞ ಡಾ. ಎಲ್.ಕೆ.ಶ್ರೀಪತಿ, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ದಕ್ಷಿಣ ಭಾರತದ ಪ್ರಮುಖ ವಿ.ಪಿ.ಮಾಧವನ್, ಪರ್ಯಾವರಣ ಟ್ರಸ್ಟ್‌ನ ಬಾಲಕೃಷ್ಣ ನಾಯ್ಡು, ಡಾ. ಬಾಲಕೃಷ್ಣ ಹೆಗಡೆ, ಎ.ಎನ್.ಪ್ರಕಾಶ್, ಮಾಜಿ ಶಾಸಕ ಮಹಿಮ ಪಟೇಲ್, ಡಾ. ವರದರಾಜ್, ಭಾರತೀಯ ಕೃಷಿಕ ಸಮಾಜದ ವಾಸುದೇವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net