ಶಿವಸೇನಾ ನಾಯಕ ಸಂಜಯ್ ರಾವುತ್ ಮೇಲೆ ಸಿನಿಮಾ ನಿರ್ಮಾಪಕಿಯಿಂದ ಗಂಭೀರ ಆರೋಪ!

swapna and sanjay raut
swapna and sanjay raut
Published on

ಮುಂಬೈ: ಮರಾಠಿ ಸಿನಿಮಾ ನಿರ್ಮಾಪಕಿ ಸ್ವಪ್ನಾ ಪಾಟ್ಕರ್ ಅವರು ಶಿವಸೇನಾ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು ಶಿವಸೇನಾ ಗುಂಡಾಗಳಿಂದ ಹಾಗೂ ಸಂಜಯ್ ರಾವುತ್​ರಿಂದ ನನಗೆ ರಕ್ಷಣೆ ಕೊಡಿಸಿ ಹಾಗೂ ನ್ಯಾಯ ಒದಗಿಸಿ ಎಂದು ಮನವಿ ಮಾಡಿದ್ದಾರೆ.

ಸತತ ಎಂಟು ವರ್ಷಗಳಿಂದ ಸಂಜಯ್ ರಾವುತ್ ನನಗೆ ಕಿರುಕುಳ ನೀಡುತ್ತಿದ್ದಾರೆ, ತೊಂದರೆ ಕೊಡುತ್ತಿದ್ದಾರೆ. ಪೋನ್​​ ಆಡಿಯೋ ವಿಡಿಯೋ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಾರೆ ಹಾಗೂ ಸಮಾಜದಲ್ಲಿ ನನ್ನ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.

ಟ್ವಿಟ್ಟರ್​ನಲ್ಲಿ ಸ್ವಪ್ನಾ ಅವರು ಪ್ರಧಾನಿಗೆ ಬರೆದಿರುವ ಪತ್ರದ ಪ್ರತಿಗಳನ್ನು ಹಂಚಿಕೊಂಡಿದ್ದಾರೆ. ನಾನು 2009 ರಿಂದ 2014 ರಲ್ಲಿ ಶಿವಸೇನಾದ ಸಾಮ್ನಾ ಪತ್ರಿಕೆಗೆ ಅಂಕಣ ಬರೆಯುತ್ತಿದ್ದೆ ಹಾಗೂ ಸಂಜಯ್ ರಾವುತ್ ಅವರಿಗೆ ಸಹಾಯಕಿ ಆಗಿ ಕೆಲಸ ಮಾಡಿದ್ದೆ. ಆದರೆ ನಾನು ಸಿನಿಮಾ ನಿರ್ಮಾಣಕ್ಕೆ ಇಳಿದ ನಂತರ ನನ್ನ ಮೇಲೆ ಅವರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸ್ವಪ್ನಾ ಆರೋಪಿಸಿದ್ದಾರೆ.

ನನ್ನ ಹಾಗೂ ನನ್ನ ಕುಟುಂಬದ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಇದಕ್ಕೆಲ್ಲ ಸಂಜಯ್ ರಾವುತ್ ಕುಮ್ಮಕ್ಕಿದೆ. ಒಂದು ಸಾರಿ ಶಿವಸೇನಾದ ಕಚೇರಿಯಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ಕೂಡ ಆಗಿದೆ ಎಂದು ಸ್ವಪ್ನಾ ಆರೋಪಿಸಿದ್ದಾರೆ. ಈ ಕುರಿತು ಶಿವಸೇನಾ ನಾಯಕ ಸಂಜಯ್ ರಾವುತ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net