

ಕೆ.ಆರ್.ನಗರ: ತಾಲೂಕಿನ ಕೆಂಪನಕೊಪ್ಪಲು ಗ್ರಾಮದಲ್ಲಿ ಗ್ರಾಮ ದೇವತೆ ಮಾರಮ್ಮ ತಾಯಿಯ ಉತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಕೆ.ಆರ್.ನಗರ ಪಟ್ಟಣದ ಹೊರವಲಯದಲ್ಲಿರುವ ಕಾಳೇನಹಳ್ಳಿ, ಕೆಂಪನಕೊಪ್ಪಲು, ಮಾರಿಗುಡಿಕೊಪ್ಪಲು, ಹೊಸಕೊಪ್ಪಲು ಮತ್ತು ಕನಕನಗರ ಬಡಾವಣೆಯ ಗ್ರಾಮಗಳಲ್ಲಿ ಒಂದು ವಾರದಿಂದ ಗ್ರಾಮ ದೇವತೆಗಳಾದ ವೆಂಕಟರಮಣಸ್ವಾಮಿ, ಬಸವೇಶ್ವರಸ್ವಾಮಿ ಮತ್ತು ಮಾರಮ್ಮ ದೇವರ ಉತ್ಸವ ಮೂರ್ತಿಗಳನ್ನು ವಿವಿಧ ಕಲಾತಂಡದೊಂದಿಗೆ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ತೆರಳುವ ರಸ್ತೆಗಳನ್ನು ತಳಿರು ತೋರಣ, ವಿದ್ಯುತ್ ದೀಪಾಲಂಕರಗಳಿಂದ ಶೃಂಗರಿಸಲಾಗಿತ್ತು. ನಾಲ್ಕು ಗ್ರಾಮಗಳಲ್ಲಿರುವ ಮಾರಮ್ಮ ದೇವಾಲಯಕ್ಕೆ ಸೋಮವಾರ ಬೆಳಗ್ಗೆ ಮಹಿಳೆಯರು ತೆರಳಿ ತಂಬಿಟ್ಟು ಆರತಿಯೊಂದಿಗೆ ದೇವತೆಗೆ ನೈವೇದ್ಯ ಅರ್ಪಿಸಿ ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿದರು.
ದೇವರ ಕುಣಿತ, ಮಂಗಳವಾದ್ಯ, ತಮಟೆ, ನಗಾರಿ ಮತ್ತಿತರ ಕುಣಿತಗಳು ಗ್ರಾಮಸ್ಥರನ್ನು ಆಕರ್ಷಿಸಿದವು.
ಗ್ರಾಮದ ಯಜಮಾನ ಕೆ.ಜೆ.ಕುಮಾರ್, ದೇವರಾಜ್, ಅರ್ಚಕ ಸ್ವಾಮಿಗೌಡ, ಧನುಷ್ ಸಮ್ಮುಖದಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ.ಜಗದೀಶ್, ವಕೀಲ ಕೆ.ಎಸ್.ದಿನೇಶ್, ಗ್ರಾಮದ ಮುಖಂಡ ಪುಟ್ಟೇಗೌಡ, ಬಸವರಾಜು, ಚಂದ್ರಹಾಸ, ಕೆ.ಎಂ.ರಾಜು, ಸುಮಂತ್, ಕೆ.ಸಿ.ವಿಶ್ವನಾಥ್, ಕೆ.ಎಂ.ಗಿರೀಶ್, ವೆಂಕಟರಾಮು(ಪಾಂಡು), ಆಟೋಶಿವರಾಜು, ಮಹದೇವ್, ಕುಮಾರ್, ಕೆ.ಎಂ.ಹರೀಶ್ ಮತ್ತಿತರರು ಹಾಜರಿದ್ದರು.