

ನವದೆಹಲಿ: ಲಾಕ್ಡೌನ್ ಸತತವಾಗಿ ಮುಂದುವರಿಯುತ್ತಿರುವ ಕಾರಣ ತೀವ್ರ ಕಷ್ಟಕ್ಕೆ ಒಳಗಾಗಿರುವ ಅದೆಷ್ಟೋ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ದೌಡಾಯಿಸುತ್ತಿದ್ದಾರೆ. ಅನೇಕರು ಊರಿಗೆ ಹೋಗಲು ವಾಹನಗಳ ವ್ಯವಸ್ಥೆ ಇಲ್ಲದೆ ನಡೆದುಕೊಂಡೇ ಹೋಗುತ್ತಿದ್ದಾರೆ. ವಲಸೆ ಕಾರ್ಮಿಕರು ಅವರ ಊರನ್ನು ತಲುಪಲು ಕೇಂದ್ರ ಸರ್ಕಾರ ಶ್ರಮಿಕ್ ರೈಲು ವ್ಯವಸ್ಥೆಯನ್ನು ಮಾಡಿದ್ದರೂ ಅದು ಎಲ್ಲರಿಗೂ ತಲುಪುವಲ್ಲಿ ವಿಳಂಬವಾಗುತ್ತಿದೆ.
ಈ ಮಧ್ಯ ವಲಸೆ ಕಾರ್ಮಿಕರನ್ನು ಕೇಂದ್ರ ಸರ್ಕಾರ ಸಂಕಷ್ಟಕ್ಕೆ ದೂಡಿದೆ. ಅವರ ಬಗ್ಗೆ ಗಮನ ಹರಿಸುತ್ತಿಲ್ಲ. ಕಾಲ್ನಡಿಗೆಯಲ್ಲೇ ಊರುಗಳಿಗೆ ಹೋಗುತ್ತಿದ್ದರೂ ನಿರ್ಲಕ್ಷ್ಯವಹಿಸುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ.
ಅದರಲ್ಲೂ ಕಾಂಗ್ರೆಸ್ ನಾಯಕಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ನಿಮ್ಮ ಕೈಲಾಗದೆ ಇದ್ದರೆ ಹೇಳಿ ನಾವೇ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡುತ್ತೇವೆ. 1000 ಬಸ್ಗಳನ್ನು ಮಂಗಳವಾರ ಸಂಜೆ 5ಗಂಟೆ ಹೊತ್ತಿಗೆ ಕಳಿಸಿಕೊಡುತ್ತೇವೆ. ಅದರಲ್ಲಿಯೇ ಕಾರ್ಮಿಕರಿಗೆ ಅವರ ಊರುಗಳಿಗೆ ತಲುಪಿಸಿ ಎಂದು ರಾಜ್ಯದ ಗೃಹ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಪ್ರಿಯಾಂಕಾ ಗಾಂಧಿಯವರ ಈ ಮಾತಿಗೆ ಹೆಚ್ಚೇನೂ ಪ್ರತಿಕ್ರಿಯೆ ನೀಡದ ಸಿಎಂ ಯೋಗಿ ಆದಿತ್ಯ ನಾಥ್ ಅವರು ಒಪ್ಪಿಗೆ ಸೂಚಿಸಿದ್ದರು. ಬಸ್ ವ್ಯವಸ್ಥೆ ಮಾಡಿ ಎಂದಿದ್ದರು.
ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಸಲಹೆಗಾರ ಒಂದು ಅಚ್ಚರಿ ಉಂಟು ಮಾಡುವ ಸತ್ಯವನ್ನು ತಿಳಿಸಿದ್ದಾರೆ. ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್ ವ್ಯವಸ್ಥೆ ಮಾಡಿರುವ ವಾಹನಗಳು ಬಹುತೇಕ ದ್ವಿಚಕ್ರವಾಹನಗಳು, ರಿಕ್ಷಾ, ಕಾರು ಮತ್ತು ಗೂಡ್ಸ್ಗಳು ಹೊರತು ಬಸ್ಗಳಲ್ಲ ಎಂದು ಹೇಳಿದ್ದಾರೆ.
ವಲಸೆ ಕಾರ್ಮಿಕರಿಗೆ ಊರಿಗೆ ಹೋಗಲು ವ್ಯವಸ್ಥೆ ಮಾಡಿರುವ ವಾಹನಗಳ ನೋಂದಣಿ ಸಂಖ್ಯೆಯ ಲಿಸ್ಟ್ನ್ನು ಕಾಂಗ್ರೆಸ್ ಕೊಟ್ಟಿದೆ. ನೋಂದಣಿ ಸಂಖ್ಯೆಯನ್ನು ಪ್ರಾಥಮಿಕ ಪರಿಶೀಲನೆಗೆ ಒಳಪಡಿಸಿದಾಗಲೇ ಗೊತ್ತಾಯಿತು ಅವೆಲ್ಲ ಚಿಕ್ಕಚಿಕ್ಕ ವಾಹನಗಳೆಂದು. ಬಸ್ ಹೆಸರಿನಲ್ಲಿ ಗೂಡ್ಸ್ ಕ್ಯಾರಿಯರ್, ಆಟೋ ರಿಕ್ಷಾ, ಸ್ಕೂಟರ್ಗಳನ್ನು ನೀಡಿರುವ ಕಾಂಗ್ರೆಸ್ ವಲಸೆ ಕಾರ್ಮಿಕರ ವಿಚಾರದಲ್ಲಿಯೂ ರಾಜಕೀಯ, ಹಗರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ಒಂದೇ ದಿನ ಐವರಲ್ಲಿ ಸೋಂಕು ಪತ್ತೆ!