

ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದಲ್ಲಿರುವ ಮೆಗ್ಗಾನ್ ಆವರಣದಲ್ಲಿನ ಸೂಪರ್ ಸ್ಪೆಷಾಲಿಟಿ ಕಟ್ಟಡದಲ್ಲಿ ಗುರುವಾರದಿಂದ ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ನ್ಯೂರೋಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸೆ, ಕಿಡ್ನಿ ಕಾಯಿಲೆಗಳಿಗೂ ಇಲ್ಲಿ ಚಿಕಿತ್ಸೆ ದೊರೆಯಲಿದೆ.
ಗುರುವಾರ ಜರುಗಿದ ನೂತನ ವಿಭಾಗಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಜಿಲ್ಲಾ ಸರ್ಜನ್ ಡಾ. ಸಿದ್ದನ ಗೌಡ ಪಾಟೀಲ್, ಆಡಳಿತಾಧಿಕಾರಿ ಉಮಾ ಸದಾಶಿವ, ಡಾ. ಪರಮೇಶ್ವರಪ್ಪ, ಡಾ. ಮಹೇಶ್ ಮೂರ್ತಿ, ಶುಶ್ರೂಷಾಧಿಕಾರಿಗಳಾದ, ಶೇಷಮ್ಮ, ಮಂಜುಳಾ ಮುಂತಾದವರದ್ದರು.
ಮೂತ್ರರೋಗ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ಮೂತ್ರಪಿಂಡ ಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರ ಸೇವೆಗಳು ಸೋಮವಾರ ಮತ್ತು ಗುರುವಾರ ದೊರೆಯಲಿದೆ. ನರರೋಗ ವಿಭಾಗವು ಸೋಮವಾರ, ಬುಧವಾರ, ಶುಕ್ರವಾರ ಸಿಗಲಿದೆ. ನರರೋಗ ಶಸ್ತ್ರಚಿಕಿತ್ಸಾ ಸೇವೆಯು ಮಂಗಳವಾರ, ಗುರುವಾರ, ಶನಿವಾರ ಲಭ್ಯವಾಗಲಿದೆ. ಚಿಕಿತ್ಸೆ ನಂತರ ಶಸ್ತ್ರಚಿಕಿತ್ಸೆ ಅವಶ್ಯವಿದ್ದಲ್ಲಿ ರೋಗಿಗಳನ್ನು ದಾಖಲಿಸಿಕೊಂಡು ಬಿಪಿಎಲ್ ಕಾರ್ಡ್‌ದಾರರಿಗೆ ಎಬಿಎಆರ್‌ಕೆಯಡಿ ಉಚಿತ ಸೌಲಭ್ಯ ನೀಡಲಾಗುತ್ತದೆ.
ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ವಾರ್ಡ್‌ಗಳನ್ನು ಪ್ರಾರಂಭಿಸಲಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ ನಗರಗಳ ನಂತರ ಹೆಚ್ಚುವರಿ ಸೂಪರ್ ಸ್ಪೆಷಾಲಿಟಿ ಸೇವೆಯನ್ನು ಒದಗಿಸುವ ಸಂಸ್ಥೆಗಳ ಪಟ್ಟಿಗೆ ಶಿವಮೊಗ್ಗ ವೈದ್ಯಕೀಯ ಸಂಸ್ಥೆ ಸೇರ್ಪಡೆಯಾಗಿದೆ.