

ನವದೆಹಲಿ: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದ ನಂತರ ಉಭಯ ದೇಶಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ಇನ್ನೂ ಭರದಿಂದ ಸಾಗುತ್ತಿದ್ದು ಹಲವರನ್ನು ಅಚ್ಚರಿಯ ರೀತಿಯಲ್ಲಿ ಪಾರು ಮಾಡಿದ ಪ್ರಕರಣಗಳು ವರದಿಯಾಗಿವೆ.
ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಒಬ್ಬ ಬಾಲಕ ಮತ್ತು 62 ವರ್ಷದ ವ್ಯಕ್ತಿಯನ್ನು ಪರಿಹಾರ ಕಾರ್ಯಕರ್ತರು ಪವಾಡಸದೃಶ ರೀತಿಯಲ್ಲಿ ಪಾರು ಮಾಡಿದ್ದಾರೆ. ಆಗ್ನೇಯ ಟರ್ಕಿಯ ಹತಾಯ್ ಪ್ರಾಂತ್ಯದಲ್ಲಿ ಏಳು ವರ್ಷದ ಮುಸ್ತಾಫಾ ಮತ್ತು ನುರ್ದಾಗಿಯಲ್ಲಿ ನಫಿಜೆ ಯಿಲ್ಮಾಜ್ ಎಂಬುವವರನ್ನು ರಕ್ಷಿಸಲಾಗಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಭಾನುವಾರ ರಾತ್ರಿ ಪಾರು ಮಾಡುವವರೆಗೆ ಅವರಿಬ್ಬರೂ ಬೇರೆ ಬೇರೆ ಭಾಗಗಳಲ್ಲಿ ಅವಶೇಷಗಳಡಿ 163 ಗಂಟೆ ಕಾಲ ಸಿಲುಕಿ ಕೊಂಡಿದ್ದರು. ಇಬ್ಬರೂ ಜೀವಂತವಾಗಿ ಹೊರ ಬಂದಿದ್ದಾರೆ. ಟರ್ಕಿಯ ವಿವಿಧ ಸಂಘಟನೆಗಳ 32,000ಕ್ಕೂ ಅಧಿಕ ಹಾಗೂ 8,294 ಅಂತಾರಾಷ್ಟ್ರೀಯ ಕಾರ್ಯಕರ್ತರು ಶೋಧ ಮತ್ತು ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ.
ಅವಶೇಷಗಳಡಿ ಸುರಂಗ!
ಹತಾಯ್ನಲ್ಲಿ ಐದು ದಿನಗಳಿಂದ ಸಿಕ್ಕಿ ಹಾಕಿಕೊಂಡಿದ್ದ ವ್ಯಕ್ತಿಯನ್ನು ರಕ್ಷಿಸಲು ಒಬ್ಬ ರಕ್ಷಣಾ ಕಾರ್ಯಕರ್ತ ಅವಶೇಷಗಳಡಿ ತೆವಳುತ್ತಾ ಹೋಗಿ ಸುರಂಗ ಕೊರೆದ ಅದ್ಭುತ ವಿಡಿಯೋ ದೃಶ್ಯವನ್ನು ಬ್ರಿಟಿಷ್ ಶೋಧ ತಂಡದ ಸದಸ್ಯರೊಬ್ಬರು ಪೋಸ್ಟ್ ಮಾಡಿದ್ದು ಮಾನವೀಯ ಸಾಹಸ ಮೆಚ್ಚುಗೆಗೆ ಪಾತ್ರವಾಗಿದೆ. ದಿನಗಳೆದಂತೆ ಬದುಕುಳಿದವರ ಸಾಧ್ಯತೆ ಕ್ಷೀಣಿಸುತ್ತಿದ್ದು ರಕ್ಷಣಾ ಕಾರ್ಯಕರ್ತರು ಕಾಲದೊಂದಿಗೆ ಸ್ಪರ್ಧೆಗಿಳಿದು ಬಹಳ ಕಷ್ಟದ ಸನ್ನಿವೇಶ ಎದುರಿಸುತ್ತಿದ್ದಾರೆ. ಭೂಕಂಪ ಕೇಂದ್ರದ ಸಮೀಪದ ಕಹ್ರ್ಮನ್ಮಾರಸ್ ನಗರದಲ್ಲಿ ಕಟ್ಟಡಗಳ ಅವಶೇಷಗಳ ಪರ್ವತವನ್ನು ಯಂತ್ರಗಳ ಮೂಲಕ ತಳ್ಳಿದ ಕಾರ್ಯಕರ್ತರು ಒಂದು ಮೃತದೇಹವನ್ನು ಅಲ್ಲಿಂದ ತೆಗೆದಿದ್ದಾರೆ.
ಸಾಧನಗಳ ಕೊರತೆ
ಕಾಲ ಸರಿದು ಹೋಗುತ್ತಿರುವುದರ ಜೊತೆಯಲ್ಲಿ ರಕ್ಷಣಾ ಕಾರ್ಯಕರ್ತರು ಸೆನ್ಸರ್ ಮತ್ತು ಇತರ ಆಧುನಿಕ ಶೋಧ ಸಲಕರಣೆಗಳ ಅಭಾವ ಎದುರಿಸುತ್ತಿದ್ದಾರೆ. ಹೀಗಾಗಿ ಅವರು ಎಚ್ಚರಿಕೆಯಿಂದ; ಕೆಲವೊಮ್ಮೆ ಅವಶೇಷ ಗಳನ್ನು ಬರಿಗೈಗಳಲ್ಲಿ ಶೋಧ ನಡೆಸುವ ಪರಿಸ್ಥಿತಿ ಉಂಟಾಗಿದೆ. ಮುಂದುವರಿದ ಉತ್ತಮ ಸಾಧನ ಸಲಕರಣೆಗಳಿದ್ದರೆ ನೂರಾರು ಜೀವಗಳನ್ನು ಉಳಿಸಬಹುದಿತ್ತು ಎಂದು ವಾಯವ್ಯ ಸಿರಿಯಾದ ಜಬ್ಲೇಹ್ನ ನಾಗರಿಕ ರಕ್ಷಣಾ ಪಡೆ ಮುಖ್ಯಸ್ಥ ಅಲಾ ಮುಬಾರಕ್ ಅಭಿಪ್ರಾಯ ಪಟ್ಟಿದ್ದಾರೆ.
ಬಾಲಕಿಯನ್ನು ರಕ್ಷಿಸಿದ ಭಾರತದ ಶ್ವಾನ
ರಕ್ಷಣಾ ಕಾರ್ಯದಲ್ಲಿ ನೆರವಾಗಲು ಆಗಮಿಸಿರುವ ಭಾರತದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್ಡಿಆರ್ಎಫ್) ಭಾಗವಾಗಿರುವ ಶ್ವಾನಗಳು 6 ವರ್ಷದ ಬಾಲಕಿಯನ್ನು ರಕ್ಷಿಸಿದ ಘಟನೆ ನಡೆದಿದೆ. ಅವಶೇಷಗಳ ರಾಶಿ ತುಂಬಿಕೊಂಡ ಜಾಗದಲ್ಲಿ ಯಂತ್ರೋಪಕರಣಗಳಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗದಿದ್ದಾಗ ಎನ್ಡಿಆರ್ಎಫ್ನ ರೋಮಿಯೋ ಮತ್ತು ಜೂಲಿ ಎಂಬ ಶ್ವಾನ ಜೋಡಿ, ಮೂಸುತ್ತಾ ಹೋಗಿ ಅವಶೇಷಗಳಡಿ ಬಾಲಕಿ ಇರುವುದನ್ನು ಪತ್ತೆ ಹಚ್ಚಿದ್ದು ಅವಳನ್ನು ಸಿಬ್ಬಂದಿ ರಕ್ಷಿಸಿದ್ದಾರೆ.
ಭಾರತದ ನೆರವಿಗೆ ಟರ್ಕಿ ಶ್ಲಾಘನೆ
ಟರ್ಕಿ ಮತ್ತು ಸಿರಿಯಾಕ್ಕೆ ಭಾರತ ನೆರವನ್ನು ಕಳಿಸುತ್ತಿದ್ದು ಭಾನುವಾರ ಸಿರಿಯಾಕ್ಕೆ ಏಳನೇ ‘ಆಪರೇಷನ್ ದೋಸ್ತ್’ ವಿಮಾನ ತಲುಪಿದೆ. ಅದು 23 ಟನ್ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಒಯ್ದಿದೆ. ತಮ್ಮ ದೇಶಕ್ಕೆ ಪರಿಹಾರ ಸಾಮಗ್ರಿಗಳನ್ನು ಕಳಿಸಿದ್ದಕ್ಕಾಗಿ ಭಾರತದಲ್ಲಿರುವ ಟರ್ಕಿ ರಾಯಭಾರಿ ಫಿರಾತ್ ಸುನೇಲ್ ಮತ್ತೆ ಧನ್ಯವಾದ ಸಲ್ಲಿಸಿದ್ದಾರೆ. ‘ಪ್ರತಿಯೊಂದು ಡೇರೆ, ಹೊದಿಕೆ ಹಾಗೂ ಮಲಗುವ ಬ್ಯಾಗ್ಗಳು ಭೂಕಂಪ ಸಂತ್ರಸ್ತರಿಗೆ ತುಂಬಾ ಮಹತ್ವವಾದುದು’ ಎಂದು ಸುನೇಲ್ ಟ್ವೀಟ್ ಮಾಡಿದ್ದಾರೆ.
35 ಸಾವಿರ ಜನರ ಸಾವು
ಭೂಕಂಪ ಸಂಭವಿಸಿ ವಾರವೇ ಕಳೆದು ಹೋಗಿದ್ದರೂ ಈ ಪ್ರಕೃತಿ ವಿಕೋಪಕ್ಕೆ ಬಲಿಯಾದವರ ನಿಖರ ಸಂಖ್ಯೆ ಇನ್ನೂ ಗೊತ್ತಾಗಿಲ್ಲ. ಸೋಮವಾರದವರೆಗೆ ಮೃತರ ಸಂಖ್ಯೆ 35,000 ಎಂದು ಅಂದಾಜು ಮಾಡಲಾಗಿದ್ದು ಇನ್ನೂ ಹೆಚ್ಚಾಗುವ ಸಂಭವವಿದೆ ಎಂಬುದು ವಿಶ್ವ ಸಂಸ್ಥೆಯ ಕಳವಳವಾಗಿದೆ.