ಕಲಿಕೆಯ ಮುದ; ಹಲವು ತರಗತಿ ಪುನರಾರಂಭ

Editorial
Published on

ಕರೊನಾ ಆತಂಕದ ಕಾರಣದಿಂದಾಗಿ ಸರಿಸುಮಾರು 9 ತಿಂಗಳು ಶಾಲಾಕಾಲೇಜುಗಳು ನಡೆದಿರಲಿಲ್ಲ. ಮಕ್ಕಳು ಮನೆಯಲ್ಲಿಯೆ ಉಳಿದುಕೊಂಡು ಆನ್​ಲೈನ್ ಮೂಲಕ ಶಿಕ್ಷಣ ಮುಂದುವರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಕೆಲ ದಿನಗಳ ಹಿಂದೆ ಪದವಿ ಹಂತದಲ್ಲಿ ಕಾಲೇಜು ಆರಂಭವಾಗಿದ್ದು, ಇದೀಗ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪುನರಾರಂಭವಾಗಿವೆ. ಜತೆಗೆ, 6ರಿಂದ 9ನೇ ತರಗತಿಯವರೆಗೆ ಪರಿಷ್ಕೃತ ರೂಪದಲ್ಲಿ ವಿದ್ಯಾಗಮ ಕೂಡ ಶುರುವಾಗಿದೆ. ಅನೇಕ ಕಡೆಗಳಲ್ಲಿ ಮೊದಲ ದಿನವೇ ವಿದ್ಯಾರ್ಥಿಗಳು ಶಾಲೆಗೆ ಬರುವ ಉತ್ಸಾಹ ತೋರಿಸಿದ್ದಾರೆ. ಇದು ಸಹಜ ಕೂಡ. ಕೆಲವೆಡೆ ಖಾಸಗಿ ಶಾಲೆಗಳು ಆರಂಭವಾಗಿಲ್ಲ. ಸೋಮವಾರದಿಂದ ವಿದ್ಯಾರ್ಥಿಗಳ ಹಾಜರಿ ಹೆಚ್ಚುವ ನಿರೀಕ್ಷೆ ಇದೆ.

ಕರೊನಾ ತಂದೊಡ್ಡಿದ ಪರಿಸ್ಥಿತಿಯಿಂದಾಗಿ ಹೆಚ್ಚು ಬಾಧೆಗೆ ಒಳಗಾದ ರಂಗಗಳಲ್ಲಿ ಶಿಕ್ಷಣ ಕ್ಷೇತ್ರವೂ ಸೇರಿದೆ. ಮಕ್ಕಳು ಮತ್ತು ಶಿಕ್ಷಕರು ಬೇರೆ ಬೇರೆ ತೆರನಾದ ಆತಂಕ, ಕಳವಳಗಳನ್ನು ಎದುರಿಸಬೇಕಾಯಿತು. ಅದರಲ್ಲೂ ಖಾಸಗಿ ಶಾಲೆಗಳ ಬೋಧಕ ವರ್ಗಕ್ಕೆ ಮತ್ತಷ್ಟು ತೊಂದರೆ ಎದುರಾಯಿತು. ಎಷ್ಟೋ ಜನರ ನೌಕರಿ ಹೋಯಿತು. ಇನ್ನೊಂದೆಡೆ, ಸರ್ಕಾರಿ ಮತ್ತು ಖಾಸಗಿ ಎರಡೂ ಶಾಲಾ ವಿದ್ಯಾರ್ಥಿಗಳು ಮತ್ತೊಂದು ರೀತಿಯ ಪರಿಸ್ಥಿತಿಗೆ ಮುಖಾಮುಖಿಯಾಗಬೇಕಾಗಿ ಬಂತು. ಕರೊನಾ ಲಾಕ್​ಡೌನ್ ಕಾರಣಕ್ಕೆ ಶಾಲೆಗಳು ತೆರೆಯದ್ದರಿಂದಾಗಿ ಕಲಿಕೆ ಹೇಗೆ ಎಂಬ ಪ್ರಶ್ನೆ ಎದುರಾಗಿತ್ತು. ಆಗ ಆನ್​ಲೈನ್ ತರಗತಿಗಳನ್ನು ಆರಂಭಿಸಲಾಯಿತು. ಈ ಪರಿಕಲ್ಪನೆ ನಮ್ಮ ಸಂದರ್ಭದಲ್ಲಿ ಸ್ವಲ್ಪ ಹೊಸದೇ ಎನ್ನಬೇಕು. ಹೀಗಾಗಿ ಆರಂಭದಲ್ಲಿ ಈ ವ್ಯವಸ್ಥೆಯಲ್ಲಿ ಒಂದಷ್ಟು ಗೋಜಲು ಗೊಂದಲಗಳು ಉಂಟಾದವು. ಕೆಲವೆಡೆ ನೆಟ್ವರ್ಕ್ ಸಮಸ್ಯೆ ಎದುರಾಯಿತು. ಅಂತೂ ಮಕ್ಕಳು ಮತ್ತು ಶಿಕ್ಷಕರು ಇದಕ್ಕೆ ಹೊಂದಿಕೊಂಡರು ಎನ್ನುವಷ್ಟರಲ್ಲಿ, ಆನ್​ಲೈನ್ ಕಲಿಕೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ಥಿತಿಗತಿ ಮೇಲೆ ಆಗುವ ಪರಿಣಾಮಗಳ ಬಗ್ಗೆ ಕಳವಳಗಳು ವ್ಯಕ್ತವಾಗತೊಡಗಿದವು. ಹೀಗಾಗಿ ಒಂದು ಹಂತದ ನಂತರ, ಶಾಲೆಗಳನ್ನು ತೆರೆಯಬೇಕೆಂಬ ಆಗ್ರಹ ಕೆಲ ವಲಯಗಳಿಂದ ಬರತೊಡಗಿತು. ಆದರೆ ಸರ್ಕಾರ ಎಲ್ಲ ವಿಷಯಗಳನ್ನೂ ಪರಾಂಬರಿಸಿ ನಿರ್ಣಯಕ್ಕೆ ಬರಲು ಸಮಯಾವಕಾಶ ತೆಗೆದುಕೊಂಡಿತು.

ಇಂದಿನ ಪರಿಸ್ಥಿತಿಯಲ್ಲಿ ಇಂಥ ಸಂಯಮ ಮತ್ತು ವಿವೇಚನೆ ಅನಿವಾರ್ಯವೂ ಆಗಿತ್ತು. ಅಂತೂ ಈಗ ಒಂದುಮಟ್ಟಿಗೆ ತರಗತಿಗಳು ತೆರೆದುಕೊಂಡಿವೆ. ಆದರೆ 1-5ನೇ ತರಗತಿವರೆಗೆ ಸದ್ಯ ಶಾಲೆ ಬೇಡ ಎಂಬ ನಿಲುವಿಗೆ ಸರ್ಕಾರ ಬಂದಿದೆ. ಈಗ ಆರಂಭವಾಗಿರುವ ತರಗತಿಗಳ ಅನುಭವದ ಹಿನ್ನೆಲೆಯಲ್ಲಿ, ಜನವರಿ 15 ನಂತರ ಇತರ ತರಗತಿಗಳನ್ನೂ ಪುನರಾರಂಭಿಸುವ ಬಗ್ಗೆ ಸರ್ಕಾರ ಆಲೋಚಿಸಬಹುದು. ಏಕೆಂದರೆ, ಮಕ್ಕಳು ಶಾಲೆಗೆ ಬಂದು ಕಲಿತಾಗಲೇ ಅದರ ಪರಿಣಾಮ ಬೇರೆ ಎಂಬುದು ಅನುಭವಸಿದ್ಧ ವಿಚಾರ. ಆದರೆ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಮಾತ್ರ ಯಾವುದೇ ಹಂತದಲ್ಲಿಯೂ ಎಳ್ಳಷ್ಟೂ ನಿರ್ಲಕ್ಷಿಸಬಾರದು. ಈ ಮಾತು ಶಾಲೆಗಳು, ಶಿಕ್ಷಕರು, ಮಕ್ಕಳು ಮತ್ತು ಪಾಲಕರು ಹೀಗೆ ಎಲ್ಲರಿಗೂ ಅನ್ವಯಿಸುವ ಮಾತು. ಏಕೆಂದರೆ, ಕರೊನಾದಿಂದಾಗಿ ಈಗಾಗಲೇ ಸಾಕಷ್ಟು ಕಷ್ಟನಷ್ಟ ಎದುರಿಸಿರುವ ನಾವು ಮತ್ತಷ್ಟು ಸಂಕಟವನ್ನು ಮೈಮೇಲೆಳೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಒಟ್ಟಿನಲ್ಲಿ, ಕಲಿಕೆಯ ಮುದದಿಂದ ಮಕ್ಕಳು ವಂಚಿತರಾಗಬಾರದಷ್ಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net