

ಶಿವಮೊಗ್ಗ: ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರ ನೇಮಕಾತಿ ಸಂದರ್ಭ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅನುಸರಿಸಿದ ಏಕಪಕ್ಷೀಯ ತೀರ್ಮಾನ ಖಂಡಿಸಿ ಜಿಲ್ಲೆಯ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಘಟನೆಗೆ ಸಾಮೂಹಿಕ ರಾಜೀನಾಮೆ ಘೋಷಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಆರ್.ವೆಂಕಟೇಶ್ ಹೆಗ್ಡೆ, ಹಲವು ವರ್ಷಗಳಿಂದ ಕನ್ನಡಪರ ಹೋರಾಟಕ್ಕಾಗಿ ನಾರಾಯಣ ಗೌಡ ಬಣದಲ್ಲಿ ಗುರುತಿಸಿಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೆ ನೂರಾರು ಮಂದಿ ಕೆಲಸ ಮಾಡಿದ್ದೇವೆ. ಈಗ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಯಲ್ಲಿ ನಾರಾಯಣ ಗೌಡ ಅವರ ಏಕಪಕ್ಷೀಯ ತೀರ್ಮಾನ ಬೇಸರ ತರಿಸಿದೆ ಎಂದರು.
ರಾಜ್ಯಾಧ್ಯಕ್ಷರ ಸಂಘಟನೆಯ ಬದ್ಧತೆ, ಕಾಳಜಿ ಬಗ್ಗೆ ನಮ್ಮ ತಕರಾರಿಲ್ಲ. ಜಿಲ್ಲಾಧ್ಯಕ್ಷರನ್ನು ನೇಮಿಸುವಾಗ ಸಂಘಟನೆಗಾಗಿ ದುಡಿದ ಪದಾಧಿಕಾರಿಗಳನ್ನು ಒಮ್ಮೆಯಾದರೂ ಸಂಪರ್ಕಿಸಬೇಕಿತ್ತು. ಅಭಿಪ್ರಾಯ ಕೇಳಬೇಕಿತ್ತು. ತೀರ್ಥಹಳ್ಳಿ ತಾಲೂಕು ಘಟಕ ಹೊರತುಪಡಿಸಿ, ಉಳಿದ ಎಲ್ಲ ತಾಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ನೂರಾರು ಮಂದಿ ಕಾರ್ಯಕರ್ತರು ರಾಜೀನಾಮೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕರವೇ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕೋಟ್ಯಾನ್ ಮಾತನಾಡಿ, ರಾಜ್ಯಾಧ್ಯಕ್ಷರ ನಿರ್ಧಾರವನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ ಅವರು ನೇಮಿಸಿರುವ ಜಿಲ್ಲಾಧ್ಯಕ್ಷರು ಹಾಗೂ ಮಹಿಳಾ ಘಟಕದ ಅಧ್ಯಕ್ಷರ ಜತೆಗೆ ನಮಗೆ ಕೆಲಸ ಮಾಡಲು ಇಷ್ಟವಿಲ್ಲ. ನಾವು ಸಂಘಟನೆಯಲ್ಲಿ ಇಷ್ಟು ವರ್ಷ ಬದ್ಧತೆ ಮತ್ತು ಶಿಸ್ತಿನಿಂದ ಕೆಲಸ ಮಾಡುತ್ತ ಬಂದಿದ್ದೇವೆ. ಹೀಗಾಗಿ ರಾಜೀನಾಮೆ ನೀಡಿ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಗೆ ಸೇರ್ಪಡೆ ಆಗುತ್ತಿದ್ದೇವೆ ಎಂದರು.
ಜಿಲ್ಲಾ ಗೌರವಾಧ್ಯಕ್ಷ ನಿಂಬೆಹಣ್ಣು ಮಂಜುನಾಥ್, ಪ್ರಮುಖರಾದ ಬಲೀಂದ್ರಪ್ಪ ಸೊರಬ, ಸುರೇಂದ್ರ, ಜ್ಯೋತಿ ದಿಲೀಪ್ ತೀರ್ಥಹಳ್ಳಿ, ಮನೋಜ್ ಕುಗ್ವೆ, ಪ್ರವೀಣ್ ಗೌಡ ಹೊಸನಗರ, ಲಿಂಗರಾಜ್, ವಿನಯ್, ಪರಮೇಶ್ವರ್, ರಂಗನಾಥ್ ಸುದ್ದಿಗೋಷ್ಠಿಯಲ್ಲಿದ್ದರು.