ಸರ್ಕಾರಿ ಕೆಲಸದ ಹೆಸರಿನಲ್ಲಿ ಹಲವು ಮಂದಿಗೆ ಧೋಖಾ : ಕಾಂಗ್ರೆಸ್ ನಾಯಕಿ ಸಂದ್ಯಾ ಪವಿತ್ರಾ ನಾಗರಾಜ್ ಅವರಿಂದ ಮೋಸ

Crime Logo
Published on

ಬೆಂಗಳೂರು: ಯುವ ಕಾಂಗ್ರೆಸ್ ನಾಯಕಿ ಎನ್ನಲಾದ ಸಂದ್ಯಾ ಪವಿತ್ರಾ ನಾಗರಾಜ್ ಎಂಬುವರು ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರುತಿ ನಗರದಲ್ಲಿ ವಾಸವಾಗಿರುವ ವೀಣಾ ಎಂಬುವರಿಗೆ ಸಂದ್ಯಾ ಪವಿತ್ರಾ ನಾಗರಾಜ್ ಅವರು ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದಾರೆ. ವೀಣಾ ಅವರು ಸರ್ಕಾರಿ ಕೆಲಸ ಹುಡುಕುತ್ತಿರುವ ವಿಚಾರ ಸಂದ್ಯಾ ಅವರಿಗೆ ತಿಳಿದಿದೆ. ನಂತರ ಸಂದ್ಯಾ ಎಂ.ಎಸ್ ಬಿಲ್ಡಿಂಗ್‌ನಲ್ಲಿ ಸರ್ಕಾರಿ ಕೆಲಸ ಕೊಡಿಸುತ್ತೇನೆಂದು ವೀಣಾ ಅವರಿಂದ ೨೦ ಲಕ್ಷ ರೂ. ಹಣ ಪಡೆದಿದ್ದಾರೆ. ಆದರೆ ಇದೀಗ ಸಂದ್ಯಾ ಸರ್ಕಾರಿ ಕೆಲಸ ಕೊಡಿಸದೇ ಮತ್ತು ಹಣವನ್ನು ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ವೀಣಾ ದೂರಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.

೧೧.೨೦ ಲಕ್ಷ ರೂ. ಪಡೆದು ವಂಚನೆ:
ಮತ್ತೊಂದು ಪ್ರಕರಣದಲ್ಲಿ ರಂಗಸ್ವಾಮಿ ಎಂಬುವವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಹಂತ ಹಂತಾಗಿ ೭.೭ ಲಕ್ಷ ರೂ. ಪಡೆದು ವಂಚಿಸಲಾಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
೨೦೨೧ರಲ್ಲಿ ರಂಗಸ್ವಾಮಿ ಎಂಬುವವರು ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದು, ಆ ಸಮಯದಲ್ಲಿ ಭಾನುಪ್ರಕಾಶ ಎಂಬುವವರು ಪರಿಚಯವಾಗಿದ್ದು, ಅವರು ರಂಗಸ್ವಾಮಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಹರೀಶ ಎಂಬುವವರನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. ಹರೀಶ್ ರಂಗಸ್ವಾಮಿ ಅವರಿಂದ ೩.೫೦ ಲಕ್ಷ ರೂ. ಪಡೆದುಕೊಂಡು ಮತ್ತು ರಂಗಸ್ವಾಮಿ ಅವರ ಸಹೋದರಿ ರೂಪಾ. ಚಂದ್ರಶೇಖರ್ ಎಂಬುವರಿಂದಲೂ ೩.೫೦ ಲಕ್ಷ ರೂ. ತೆಗೆದುಕೊಂಡಿದ್ದಾನೆ. ಆದರೆ ಹರೀಶ್ ಕೆಲಸ ಕೊಡಿಸಲಿಲ್ಲ. ಈ ಹಿನ್ನೆಲೆಯಲ್ಲಿ ರಂಗಸ್ವಾಮಿ ಅವರು ಹರೀಶ್‌ಗೆ ಕರೆ ಮಾಡಿ ವಿಚಾರಿಸಿದಾಗ, ಹರೀಶ್ ನೀವು ನೀಡಿರುವ ಹಣವನ್ನು ನಾನು ಸಂದ್ಯಾ ಪವಿತ್ರ ನಾಗರಾಜ್ ಅವರಿಗೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ಹರೀಶ್ ರಂಗಸ್ವಾಮಿಯವರನ್ನು ಕರೆದುಕೊಂಡು ಹೋಗಿ ಸಂದ್ಯಾ ಪವಿತ್ರ ನಾಗರಾಜ್ ಅವರ ಪರಿಚಯ ಮಾಡಿಸಿದ್ದಾರೆ. ನಂತರ ಸಂದ್ಯಾ ನಾಗರಾಜ್ ಅವರು ನಿಮಗೆ ಹಣ ವಾಪಸ್ ಕೊಡುವುದಿಲ್ಲ. ಇನ್ನೂ ೭,೭೦,೦೦೦ ರೂ. ಹಣವನ್ನು ನೀಡಿದರೆ ನಿಮಗೂ ಮತ್ತು ತಮ್ಮ ರಂಗಸ್ವಾಮಿಗೂ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಬಳಿಕ ರೂಪಾ ಮತ್ತು ರಂಗಸ್ವಾಮಿ ಹಂತ ಹಂತವಾಗಿ ಸುಮಾರು ೭,೭೦,೦೦೦ ರೂ. ಹಣವನ್ನು ಸಂದ್ಯಾ ಪವಿತ್ರಾ ನಾಗರಾಜ್ಗೆ ನೀಡಿದ್ದಾರೆ. ಬಳಿಕ ರಂಗಸ್ವಾಮಿ ಮತ್ತು ಪವಿತ್ರ ನಾಗರಾಜ್ ಅವರು ಕೆಲಸದ ಬಗ್ಗೆ ಮತ್ತು ಹಣದ ಬಗ್ಗೆ ಸಂದ್ಯಾ ಅವರಿಗೆ ವಿಚಾರಿಸಿದ್ದಾರೆ. ಆಗ ಸಂದ್ಯಾ ಇಲ್ಲ, ಸಲ್ಲದ ಸಬೂಬು ಹೇಳುತ್ತಾ ದಿನಗಳನ್ನು ಮುಂದೆ ಹಾಕಿದ್ದಾರೆ. ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಲ್ಲದೇ ಕೊಟ್ಟಿರುವ ಹಣವನ್ನು ವಾಪಸ್ ಕೇಳಿದರೆ ನಿಮ್ಮ ಮೇಲೆ ಕೇಸ್ ಹಾಕುತ್ತೇನೆಂದು ಸಂದ್ಯಾ ರಂಗಸ್ವಾಮಿ ಮತ್ತು ರೂಪಾ ಅವರಿಗೆ ಬೆದರಿಕೆ ಹಾಕಿದ್ದಾರೆ.

ಸಂದ್ಯಾ ಪವಿತ್ರ ನಾಗರಾಜ್ ಸುಮಾರು ಒಟ್ಟು ೧೧,೨೦,೦೦೦ ರೂ. ಪಡೆದುಕೊಂಡು ಸರ್ಕಾರಿ ಕೆಲಸವನ್ನು ಕೊಡಿಸದೆ ಹಣವನ್ನು ವಾಪಸ್ ನೀಡದೆ ನಂಬಿಸಿ ಮೋಸ ಮಾಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುಪ್ರಕಾಶ, ಹರೀಶ್ ಮತ್ತು ಸಂದ್ಯಾ ಪವಿತ್ರ ನಾಗರಾಜ್ ವಿರುದ್ಧ ರೂಪಾ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಠಾಣೆಗೆ ಹಾಜರಾಗಿ ಹಣ ವಾಪಸ್ ಕೊಡುವುದಾಗಿ ಸಂಧ್ಯಾ ಮತ್ತು ಹರೀಶ್ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಬಳಿಕ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆದರೆ ಸಂಧ್ಯಾ ನೀಡಿದ್ದ ಬ್ಯಾಂಕ್ ಚೆಕ್ ಸರಿಯಿಲ್ಲ ಎಂದು ಬ್ಯಾಂಕ್‌ನವರು ಹೇಳುತ್ತಿದ್ದಾರೆ. ಈ ಬಗ್ಗೆ ರೂಪಾ ವಿಚಾರಿಸಿದಾಗ ನಿಮ್ಮನ್ನು ಕೋರ್ಟ್‌ನಲ್ಲೇ ನೋಡಿಕೊಳ್ಳುತ್ತೀನಿ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಹಲವು ಮಂದಿಗೆ ಮೋಸ?
ಸಂದ್ಯಾ ಪವಿತ್ರ ನಾಗರಾಜ್ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವು ಮಂದಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಮಾತ್ರವಲ್ಲದೇ ಯಾದಗಿರಿವರೆಗೂ ಸಂಧ್ಯಾ ವಂಚನೆಯ ಜಾಲ ಹರಡಿಕೊಂಡಿದೆ. ಯಾದಗಿರಿ ಮೂಲದ ಯುವಕನಿಗೂ ಇದೇ ರೀತಿ ಲಕ್ಷಾಂತರ ರೂ. ಸಂಧ್ಯಾ ವಂಚಿಸಿದ್ದಾರೆ. ಆ ಯುವಕನಿಗೂ ಕೆಲಸ ಕೊಡಿಸದೇ ಹಣವನ್ನೂ ನೀಡದೆ ದೋಖಾ ಹಾಕಿದ್ದಾರೆ. ಸದ್ಯ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಯುವಕ ಚಂದು, ತನ್ನ ಹಣ ತನಗೆ ವಾಪಸ್ ನೀಡಿ ಎಂದು ವಿಡಿಯೋ ಮಾಡಿ ಗೋಳಾಡುತ್ತಿದ್ದಾನೆ. ಮನೆಯಲ್ಲಿ ಕಷ್ಟ ಇದೆ, ಜತೆಗೆ ನನಗೆ ಅನಾರೋಗ್ಯವಿದೆ. ಆಸ್ಪತ್ರೆ ಖರ್ಚಿಗೆ ಹಣ ಬೇಕಿದೆ, ನನ್ನ ಹಣ ವಾಪಸ್ ನೀಡಿ ಎಂದು ವಿಡಿಯೋದಲ್ಲಿ ಅಂಗಲಾಚಿದ್ದಾನೆ. ಸಂದ್ಯಾ ಅವರೊಂದಿಗೆ ಚಾಟ್ ಮಾಡಿರುವ ಮೆಸೇಜ್‌ಗಳು ಮತ್ತು ಹಣ ವಾಪಸ್ ನೀಡುವಂತೆ ಮನವಿ ಮಾಡಿರುವ ವಿಡಿಯೋ ವೈರಲ್ ಆಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net