

ಐರೋಪ್ಯ ಒಕ್ಕೂಟವನ್ನು ತೊರೆಯಲು 2016ರಲ್ಲಿ ಮತ ಚಲಾಯಿಸಿದಾಗಿನಿಂದ ಬ್ರಿಟನ್ ಬಿಕ್ಕಟ್ಟಿನ ಸ್ಥಿತಿಯನ್ನು ಎದುರಿಸಿದೆ. ಐರೋಪ್ಯ ಒಕ್ಕೂಟದಿಂದ ಹೊರಬರುವ ಬ್ರೆಕ್ಸಿಟ್ ಜನಮತದ ಪರವಾಗಿದ್ದ ಬೋರಿಸ್ ಜಾನ್ಸನ್ ಅವರು ಕನ್ಸರ್ವೆಟಿವ್ (ಟೋರಿ) ಪಕ್ಷವನ್ನು 2019ರಲ್ಲಿ ಭಾರಿ ಗೆಲುವಿನತ್ತ ಮುನ್ನಡೆಸಿದರು, ಸರಣಿ ಹಗರಣಗಳ ಹಿನ್ನೆಲೆಯಲ್ಲಿ ಮೂರು ವರ್ಷಗಳ ನಂತರ ಪ್ರಧಾನಿ ಸ್ಥಾನದಿಂದ ರಾಜೀನಾಮೆ ನೀಡಿ ನಿರ್ಗಮಿಸಿದರು. ಅವರ ಉತ್ತರಾಧಿಕಾರಿ ಟ್ರಸ್ ಅವರು ದೇಶದ ಆರ್ಥಿಕ ವಿಶ್ವಾಸಾರ್ಹತೆಗೆ ಕುಂದು ತರುವ ಆರ್ಥಿಕ ನೀತಿ ಅನುರಿಸಿದ ಅಪಖ್ಯಾತಿಗೆ ಭಾಜನರಾಗಿ ಕೇವಲ 6 ವಾರಗಳ ಅವಧಿಯಲ್ಲಿಯೇ ಪ್ರಧಾನಿ ಹುದ್ದೆ ತ್ಯಜಿಸಿದರು.
ಈಗ ನೂತನ ಪ್ರಧಾನಿಯಾಗುತ್ತಿರುವ ರಿಷಿ ಸುನಕ್ ಅವರ ಮುಂದೆ ಆರ್ಥಿಕ ಹಾಗೂ ರಾಜಕೀಯ ಸವಾಲುಗಳಿವೆ. ತಮ್ಮ ಪಕ್ಷದಲ್ಲೇ ಕಾದಾಡುತ್ತಿರುವ ಅನೇಕ ಬಣಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಬೇಕಾಗಿದೆ. ಅಲ್ಲದೆ, ದೇಶದ ಕುಸಿಯುತ್ತಿರುವ ಹಣಕಾಸು ಸ್ಥಿತಿಯನ್ನು ಸುಧಾರಿಸಬೇಕಿದೆ. ಈ ಎರಡನ್ನೂ ಅವರು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆಗಳು ತಲೆದೋರಿವೆ.
ಕೋವಿಡ್-19 ಸಾಂಕ್ರಾಮಿಕ ರೋಗವು ಬ್ರಿಟನ್ಗೆ ಅಪ್ಪಳಿಸಿದ ಸಂದರ್ಭದಲ್ಲಿ ಸುನಕ್ ಅವರು ಹಣಕಾಸು ಸಚಿವರಾಗಿದ್ದರು. ಆಗ ಅವರು, ಯಶಸ್ವಿಯಾಗಿ ಫಲೋ ಯೋಜನೆಯನ್ನು (ಕಂಪನಿ ಅಥವಾ ಉದ್ಯೋಗದಾತರ ಅಗತ್ಯತೆ ಅನುಸಾರ ಉದ್ಯೋಗಿಗೆ ಕಡ್ಡಾಯ ರಜೆ ಯೋಜನೆ) ಅಭಿವೃದ್ಧಿಪಡಿಸುವ ಮೂಲಕ ಸಾರ್ವಜನಿಕ ಗಮನ ಸೆಳೆದಿದ್ದರು. ನಾಲ್ಕು ದಶಕಗಳಲ್ಲಿ ಅತಿಹೆಚ್ಚಿನ ಹಣದುಬ್ಬರವನ್ನು ಇಂಗ್ಲೆಂಡ್ ಈಗ ಕಂಡಿದೆ. ಇದೇ ಅವಧಿಯಲ್ಲಿ ಡಾಲರ್ ಎದುರು ಪೌಂಡ್ ಬೆಲೆಯು ಸಾರ್ವಕಾಲಿಕವಾಗಿ ಕುಸಿದಿದೆ. ಗೋಲ್ಡ್ಮನ್ ಸ್ಯಾಚ್ಸ್ ಕಂಪನಿಯ ವಿಶ್ಲೇಷಕರಾಗಿ ಕಾರ್ಯನಿರ್ವಹಿಸಿರುವ ಸುನಕ್ ಅವರಿಗೆ ಕುಸಿಯುತ್ತಿರುವ ಬ್ರಿಟನ್ ಆರ್ಥಿಕತೆಯನ್ನು ಸುಧಾರಿಸುವ ಮಹತ್ವದ ಹೊಣೆ ಹೆಗಲೇರಿದೆ.
ಸೌಂತಪ್ಟಾನ್ನಲ್ಲಿ 1980ರಲ್ಲಿ ಜನಿಸಿದ ರಿಷಿ ಸುನಾಕ್ (42), ಪೂರ್ವ ಆಫ್ರಿಕಾದಿಂದ ಇಂಗ್ಲೆಂಡ್ಗೆ ವಲಸೆ ಬಂದ ಭಾರತೀಯ ಮೂಲದ ದಂಪತಿಯ ಪುತ್ರ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಹಾಗೂ ಅರ್ಥಶಾಸ್ತ್ರ ಅಧ್ಯಯನ ಕೈಗೊಂಡಿದ್ದಾರೆ. ಅಮೆರಿಕದ ಸ್ಟಾ್ಯನ್ಫರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನೂ ಗಳಿಸಿದ್ದಾರೆ. ಅಲ್ಲಿಯೇ ಅವರು, ಇನ್ಪೋಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಅವರನ್ನು ಭೇಟಿಯಾಗಿದ್ದು. 2009ರಲ್ಲಿ ಅಕ್ಷತಾ ಮತ್ತು ರಿಷಿ ವಿವಾಹವಾದರು. ಈ ದಂಪತಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಮಕ್ಕಳಿದ್ದಾರೆ.
ಸುನಕ್ ಬಗ್ಗೆ ಭಾರತ ಮತ್ತು ಪಾಕಿಸ್ತಾನಗಳೆರಡೂ ಹೆಮ್ಮೆ ಪಡುವಂಥ ವಿಚಾರವಿದೆ. ಸುನಕ್ ಭಾರತ ಮೂಲದವರೆಂದು ಹೇಳುವ ಹೊತ್ತಿನಲ್ಲೇ ಅವರ ಪೂರ್ವಜರಿಗೆ ಪಾಕಿಸ್ತಾನದ ಸಂಬಂಧವಿದೆ ಎನ್ನುವುದೂ ಗಮನಾರ್ಹವಾಗಿದೆ. ಸುನಕ್ರ ಪೂರ್ವಜರು ಭಾರತದ ಮೂಲದವರು. ಆದರೆ ಅವರೆಲ್ಲರೂ ಹುಟ್ಟಿದ್ದು ಈಗಿನ ಪಾಕಿಸ್ತಾನದಲ್ಲಿರುವ ಗುಜ್ರನ್ವಾಲಾದಲ್ಲಿ. ಹೀಗಾಗಿ, ಬ್ರಿಟನ್ನ ನೂತನ ನಾಯಕ ವಿಚಿತ್ರ ರೀತಿಯಲ್ಲಿ ಒಬ್ಬ ಭಾರತೀಯನೂ ಹೌದು ಪಾಕಿಸ್ತಾನಿಯೂ ಹೌದು.