ಜಿಲ್ಲೆಯನ್ನು ಕಾಡುತ್ತಿವೆ ಹಲವು ಸವಾಲುಳು: ಡಾ.ಜೆ.ಕೆ.ರಮೇಶ್

sammelana
ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಸಮ್ಮೇಳಾನಾಧ್ಯಕ್ಷರೊಂದಿಗೆ ಜಿಲ್ಲಾ ಕಸಾಪ ಪದಾಧಿಕಾರಿಗಳು ಹೆಜ್ಜೆ ಹಾಕಿದರು.
Published on

ಶಿವಮೊಗ್ಗ: ನಮ್ಮ ಜಿಲ್ಲೆಯಲ್ಲಿ ಹಲವು ಜನಪದ ಕಲೆಗಳು ಅವನತಿಯ ಹಾದಿ ಹಿಡಿದಿವೆ. ಜ್ಞಾನ ಭಂಡಾಗಳಾದ ಗ್ರಂಥಾಲಯಗಳಿಗೆ ಮೂಲ ಸೌಕರ್ಯವೇ ಇಲ್ಲ. ರೈತರು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭದ್ರಾವತಿಯಲ್ಲಿ ಮುಚ್ಚಿಹೋದ ಕಾರ್ಖಾನೆಗಳ ಕಾರ್ಮಿಕರ ಹೋರಾಟ ಇನ್ನೂ ಮುಗಿದಿಲ್ಲ. ಸಾಹಿತ್ಯ, ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಜಿಲ್ಲೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದು 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಜೆ.ಕೆ.ರಮೇಶ್ ಕಳವಳ ವ್ಯಕ್ತಪಡಿಸಿದರು.

ಗುರುವಾರ ಆರಂಭವಾದ ಎರಡು ದಿನಗಳ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣದಲ್ಲಿ ಅವರು ರಾಜ್ಯ ಹಾಗೂ ಜಿಲ್ಲೆಯ ಸಮಸ್ಯೆಗಳ ಎಲ್ಲ ಆಯಾಮಗಳನ್ನು ಪ್ರಸ್ತಾಪಿಸಿದರು. ಕನ್ನಡ ಭಾಷೆ, ಸಾಹಿತ್ಯಕ್ಕೆ ಎದುರಾಗಿರುವ ಕಂಟಕಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಶಿಕ್ಷಣ ಕ್ಷೇತ್ರವೂ ಸೇರಿದಂತೆ ಎಲ್ಲ ಹಂತಗಳಲ್ಲಿ ಕನ್ನಡವನ್ನು ಹೊರದಬ್ಬಲಾಗುತ್ತದೆ. ಕನ್ನಡ ಎಲ್ಲಿದೆ ಎಂದು ಸಂಶೋಧಿಸಬೇಕಾದ ಸಂದರ್ಭ ಎದುರಾಗಿದೆ. ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಕನ್ನಡ ಇಂದು ಸೊರುಗುತ್ತಿದೆ. ವಿಸ್ತರಗೊಳ್ಳಬೇಕಾದ ಭಾಷೆ ನಿರಾಶದಾಯಕ ಸ್ಥಿತಿ ತಲುಪಿದೆ. ನಾವೇ ಕನ್ನಡವನ್ನು ಕೊಲ್ಲುತ್ತಿದ್ದೇವೆ ಎಂದೆನಿಸುತ್ತಿದೆಯೆಂದು ವಿಷಾದ ವ್ಯಕ್ತಪಡಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಕತೆಯಿರಲಿ ಒಂದು ಭಾಷೆಯಾಗಿ ಕಲಿಸುವುದಕ್ಕೂ ಸಾಧ್ಯವಾಗದೆ ಶಾಲೆಗಳೇ ಮುಚ್ಚಿ ಹೋಗುತ್ತಿವೆ. ನಮ್ಮ ಮಕ್ಕಳ ಕಣ್ಣಿಗೆ ಅಕ್ಷರ ಕಾಣುವುದಿಲ್ಲ. ಕಿವಿಯ ಮೇಲೆ ಕನ್ನಡ ಮಾತು ಬೀಳುವುದಿಲ್ಲ. ವ್ಯವಹಾರಿಕ ಜಗತ್ತಿನಲ್ಲೂ ಕನ್ನಡ ಯಾರಿಗೂ ಬೇಕಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದಲ್ಲಿ ಹೆಸರಿಗೆ ಮಾತ್ರ ಕನ್ನಡ ಆಡಳಿತ ಭಾಷೆ. ಅಲ್ಲಿರುವ ಅಧಿಕಾರಿ ಶಾಹಿ, ನೌಕರ ಶಾಹಿಗೆ ಕನ್ನಡವೇ ಬೇಕಾಗಿಲ್ಲ. ಆಳುವ ರಾಜಕಾರಣಿಗಳಿಗೆ ಭಾಷೆ ಲೆಕ್ಕಕ್ಕೇ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ಭಾಷೆ ಮತ ತಂದುಕೊಡುವ ಶಕ್ತಿಯನ್ನು ಹೆಚ್ಚಿಸಿಕೊಂಡಿಲ್ಲ. ಕನ್ನಡದ ಬಗ್ಗೆ ಬದ್ಧತೆ ಇರುವ ಮಂತ್ರಿಯಾಗಲಿ, ಶಾಸಕರಾಗಲಿ, ಕರ್ನಾಟಕದಲ್ಲಿ ಇಲ್ಲವೇ ಇಲ್ಲ. ಶಾಸನ ಸಭೆಯಲ್ಲಿ ಗಟ್ಟಿದ್ವನಿಯಲ್ಲಿ ಮಾತನಾಡುತ್ತಿದ್ದ ಗೋಪಾಲಗೌಡರು, ಕೋಣಂದೂರುಲಿಂಗಪ್ಪ, ನಿಜಲಿಂಗಪ್ಪನವರ ಶಾಸಕರು ಹಾಗೂ ಮಂತ್ರಿಗಳನ್ನು ಈಗ ನೋಡಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.ಎಸ್.ಪಿ.ಪದ್ಮಪ್ರಸಾದ್, ಕಸಾಪ ಜಿಲ್ಲಧ್ಯಕ್ಷ ಡಿ.ಮಂಜುನಾಥ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಸಾಹಿತಿ, ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಮುಂತಾದವರಿದ್ದರು.

ಡಾ.ಜೆ.ಕೆ.ರಮೇಶ್, ಬಿ.ಚಂದ್ರೇಗೌಡ, ಪ್ರೊ.ಸತ್ಯನಾರಾಯಣ, ಡಾ.ಶ್ರೀಪತಿ ಅವರ ಸಾಹಿತ್ಯ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net