

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್‌ನ ದುರಾಡಳಿತ, ತುಷ್ಟೀಕರಣ ನೀತಿಯಿಂದ ಬೇಸರಗೊಂಡಿರುವ ಕಾಂಗ್ರೆಸ್‌ನ ಅನೇಕ ಕಾರ್ಯಕರ್ತರು ಹಾಗೂ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ನಗರದ ಬೊಮ್ಮನಕಟ್ಟೆ ಮತ್ತಿತರ ಭಾಗಗಳ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯತೆ ಆಧಾರದಲ್ಲಿ ಕೆಲಸ ಮಾಡುತ್ತಿದೆ ಎಂದರು.
ಸ್ವಾತಂತ್ರ ಬಳಿಕ ಕಾಂಗ್ರೆಸ್ ವಿಸರ್ಜಿಸುವಂತೆ ಗಾಂಧೀಜಿ ಹೇಳಿದ್ದರು. ಆದರೆ ಕಾಂಗ್ರೆಸ್ ರಾಜಕೀಯ ಪಕ್ಷವಾಗಿ ಅಸ್ತಿತ್ವ ಉಳಿಸಿಕೊಂಡಿತ್ತು. ಈಗ ಒಡೆದಾಡುವ ನೀತಿ ಹಾಗೂ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪೋಷಿಸುತ್ತಿದೆ. ಕಾಂಗ್ರೆಸ್‌ನ ಈ ನೀತಿ ವಿರುದ್ಧ ಜನ ಸಿಡಿದು ನಿಂತಿದ್ದಾರೆ. ಶಿವಮೊಗ್ಗದ ಎಲ್‌ಬಿಎಸ್ ನಗರ, ನವುಲೆ, ಚಿಕ್ಕಲ್, ಬೊಮ್ಮನಕಟ್ಟೆ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೇರುತ್ತಿದ್ದಾರೆ. ದೇಶ ಕಟ್ಟುವ ಕಾರ್ಯದಲ್ಲಿ ಮುಂದಿನ ದಿನಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಮೋಹನ್‌ರೆಡ್ಡಿ ಮಾತನಾಡಿ, ಪ್ರಧಾನಿ ಮೋದಿಯವರ ನೂರಾರು ಕಾರ್ಯಕ್ರಮಗಳನ್ನು ನೋಡಿ, ಬಿಜೆಪಿಗೆ ಜನರು ಸೇರುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ 77 ಸಾವಿರ ಬಿಜೆಪಿ ಸದಸ್ಯರಿದ್ದಾರೆ. ಬಿಜೆಪಿಗೆ ಭದ್ರ ಬುನಾದಿಯಿದೆ ಎಂದರು.
ಪಾಲಿಕೆ ಮಾಜಿ ಸದಸ್ಯ ಎಸ್.ಜ್ಞಾನೇಶ್ವರ್, ಸೂಡಾ ಮಾಜಿ ಅಧ್ಯಕ್ಷ ಎನ್.ಜಿ.ನಾಗರಾಜ್, ಪ್ರಮುಖರಾದ ಮಂಜುನಾಥ್ ನವುಲೆ, ರಂಗೇಶ್, ಪರಮೇಶ್ ನಾಯ್ಕ, ಶಿವಕುಮಾರ್, ಶ್ರೀನಾಥ್ ಸುದ್ದಿಗೋಷ್ಠಿಯಲ್ಲಿದ್ದರು.