

ಮಾನ್ವಿ: ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಭತ್ತದ ಬೆಳೆದ ರೈತರಿಗೆ ನಿದ್ದೆಯಿಲ್ಲದಂತಾಗಿದೆ. ಕಟಾವು ಹಂತದ ಭತ್ತ ಹಾಗೂ ರಾಶಿಯನ್ನು ರಕ್ಷಿಸಿಕೊಳ್ಳುವುದು ಹರಸಾಹಸ ಪಡುವಂತಾಗಿದೆ.
ಬಿಸಿಲಿನ ತಾಪಮಾನಕ್ಕೆ 3-4 ದಿನಕ್ಕೊಮ್ಮೆ ಸುರಿಯುವ ಮಳೆಗೆ ಭತ್ತ ನೆನೆದು ಮೊಳಕೆ ಹೊಡೆಯುತ್ತಿದೆ. ನಂತರ ಕಾಳು ಕಂದು ತಿರುಗಿತ್ತಿದ್ದು, ಬೆಲೆ ಕುಸಿತವಾಗಲಿದೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ. ಗಾಳಿ ಮಳೆಯ ಆರ್ಭಟಕ್ಕೆ ಕೆಲ ರೈತರ ತಾಡಪತ್ರೆ ಹಾರಿ ಹೋಗಿ ರಾಶಿಗಳು ತೊಯ್ದಿವೆ. ರಾಶಿ ನೆನೆಯದಂತೆ ರಕ್ಷಿಸಿಕೊಳ್ಳಲು ಇಡೀ ರಾತ್ರಿ ರೈತರು ನಿದ್ದೆಗೆಡುತ್ತಿದ್ದಾರೆ. ಭತ್ತ ಬಿತ್ತನೆಯಿಂದ ಕಟಾವು ಹಂತದವರೆಗೂ ಪ್ರತಿ ಎಕರೆಗೆ ಸುಮಾರು 35-40 ಸಾವಿರ ರೂ. ಖರ್ಚು ಮಾಡಲಾಗಿದೆ. ಈಗ ಕಟಾವು ಮಾಡುವ ಸಮಯ. ಆದರೆ ಅಕಾಲಿಕ ಮಳೆಯಿಂದ ಕೈಯಿಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಚಿಂತೆ ಮಾಡುವಂತಾಗಿದೆ.
ಭತ್ತದ ಬೆಲೆ 75 ಕೆಜಿಗೆ 1550 ರಿಂದ 1600 ರೂ. ಇದೆ. ಅಕಾಲಿಕ ಮಳೆ, ನೀರಿನ ಕೊರತೆಯಿಂದ ಇಳುವರಿ ಕಡಿಮೆ ಬಂದಿದೆ. ಇದುವೆರಗೂ ಶೇ.90 ಕಟಾವು ಕಾರ್ಯ ಮುಗಿದ ನಂತರ ಬೆಲೆ ಕುಸಿತ ಕಂಡಿದೆ. ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ 1700 ರೂ. ನಿಗದಿ ಮಾಡಿದೆ ಆದರೆ ದಲ್ಲಾಳಿಗಳು ಮಳೆಯ ನೆಪ ಇಟ್ಟುಕೊಂಡು ಭತ್ತ ಕಂದು ಬಣ್ಣ ಇದೆ ಎಂದು ಬೆಲೆ ಕಡಿಮೆ ಮಾಡಿ ಖರೀದಿಗೆ ಮುಂದಾಗುತ್ತಿದ್ದಾರೆ. ಸರ್ಕಾರ ಖರೀದಿ ಕೇಂದ್ರ ಆರಂಭ ಮಾಡಿದರೆ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈತರು ಭತ್ತ ಮಾರಾಟ ಮಾಡದೇ ರಾಶಿ ಮಾಡಿಕೊಂಡು ಬೆಲೆಗಾಗಿ ಕಾಯುತ್ತಿದ್ದಾರೆ.