ಸೂಕ್ಷ್ಮಾತಿಸೂಕ್ಷ್ಮ ಬಿಡಿಭಾಗಗಳ ತಯಾರಿಕೆ ಆಧುನಿಕ ತಂತ್ರಜ್ಞಾನ ಬಳಕೆ: ಸಚಿವ ಎಂ.ಬಿ.ಪಾಟೀಲ

IMG-20240611-WA0021
Published on

ಬೆಂಗಳೂರು: ಮಶೀನ್ ಟೂಲ್ ವಲಯವು ಜಾಗತಿಕ ಸ್ಪರ್ಧೆಯನ್ನು ಗಮನದಲ್ಲಿ ಇಟ್ಟುಕೊಂಡು ಸೂಕ್ಷ್ಮಾತಿಸೂಕ್ಷ್ಮ ಬಿಡಿಭಾಗಗಳನ್ನೂ ತಯಾರಿಸುವಂತಹ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾದ ಜರೂರಿದೆ. ಈ ಕುರಿತು ಉದ್ಯಮಿಗಳು ಸರಕಾರಕ್ಕೆ ರಚನಾತ್ಮಕ ಸಲಹೆ ನೀಡಬೇಕು. ಇದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ, ಮುಂದಿನ ಹೆಜ್ಜೆ ಇಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಖನಿಜ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಶೀನ್ ಟೂಲ್ಸ್ ವಲಯದ ವಿಷನ್ ಗ್ರೂಪಿನ ಮೊದಲ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಶೀನ್ ಟೂಲ್ ವಿಭಾಗದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ಕೊಡಬೇಕಾಗಿದೆ. ಮೆಕ್ಯಾನಿಕಲ್ ಎಂಜಿನಿಯರುಗಳಿಗೆ ಉದ್ಯಮದ ನೇರ ಅನುಭವವನ್ನು ನಾವು ಒದಗಿಸಬೇಕಾಗಿದೆ.

ಇದಕ್ಕಾಗಿ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳ ಜತೆ ಒಡಂಬಡಿಕೆಗೆ ನಾವು ಸಿದ್ಧರಾಗಿದ್ದೇವೆ. ಜಗತ್ತಿನ ಅತ್ಯುತ್ತಮ ಉದ್ಯಮಗಳು ನಮ್ಮಲ್ಲಿಗೆ ಬಂದು ಹೂಡಿಕೆ ಮಾಡುವಂತೆ ಆಗಬೇಕು. 2025ರ ಫೆಬ್ರವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಶೀನ್ ಟೂಲ್ಸ್ ವಲಯದ ಕಡೆಗೂ ಆದ್ಯ ಗಮನ ಕೊಡಲಾಗುವುದು ಎಂದು ಎಂ.ಬಿ.ಪಾಟೀಲ ತಿಳಿಸಿದರು.

ಸಲಹೆಗೆ ಸೀಮಿತವಲ್ಲ

ಸದ್ಯಕ್ಕೆ ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಶೀನ್ ಟೂಲ್ಸ್ ಪಾರ್ಕ್ ಇದೆ. ಇದರ ಜೊತೆಗೆ ಇನ್ನೂ ಹಲವು ಉಪಕ್ರಮಗಳು ಆಗಬೇಕಾಗಿದೆ. ಜತೆಗೆ ನಮ್ಮ ಉದ್ಯಮಿಗಳು ತಾವು ತಯಾೆಎಎರಿಸುವ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿ, ಗಮನ ಸೆಳೆಯಬೇಕು. ಇದಕ್ಕೆ ಸರಕಾರ ಅಗತ್ಯ ಬೆಂಬಲ ಕೊಡಲಿದೆ. ಉದ್ಯಮಿಗಳು ಸರಕಾರ ರಚಿಸಿರುವ ವಿಷನ್ ಗ್ರೂಪ್ ಅನ್ನು ಕೇವಲ ಸಲಹಾ ಸಂಸ್ಥೆ ಎಂದು ಭಾವಿಸಬಾರದು ಎಂದು ಅವರು ಒತ್ತಿ ಹೇಳಿದರು.

ಉದ್ಯಮದ ಬೇರೆಬೇರೆ ವಲಯಗಳಲ್ಲಿ ಯಾವ ಬಗೆಯ ಕೌಶಲ್ಯ ಬೇಕು ಎನ್ನುವುದನ್ನು ಉದ್ಯಮಿಗಳು ಮುಕ್ತವಾಗಿ ಹೇಳಬೇಕು. ಈಗಿನ ಪರಿಸ್ಥಿತಿ ನೋಡಿದರೆ, ನಮ್ಮಲ್ಲಿ ಫಿನಿಶಿಂಗ್ ಸ್ಕೂಲುಗಳ ಅಗತ್ಯವಿದೆ ಎನ್ನುವುದು ಸ್ಪಷ್ಟವಾಗಿದೆ. ಉದ್ಯಮಿಗಳು ಮಶೀನ್ ಟೂಲ್ ವಲಯದ ಉತ್ಕರ್ಷಕ್ಕೆ ಅಗತ್ಯವಿರುವ ನೀಲ ನಕಾಶೆಯನ್ನು ಒದಗಿಸಬೇಕು ಎಂದು ಎಂ.ಬಿ.ಪಾಟೀಲ ಕೋರಿದರು.

ಅನ್ವಯಿಕತೆಗೆ ವಿಶೇಷ ಕೇಂದ್ರ

ಮಶೀನ್ ಟೂಲ್ಸ್ ತಯಾರಿಕೆಯಲ್ಲಿ ಪುಣೆ ಮತ್ತು ರಾಜಕೋಟ್ ಕೂಡ ಮುಂಚೂಣಿಯಲ್ಲಿವೆ. ರಾಜ್ಯದಲ್ಲಿ ಈ ವಲಯದಲ್ಲಿ ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿ ಮುಂತಾದವುಗಳ ಕಡೆ ಗಮನ ಕೊಡಬೇಕಾಗಿದೆ. ಮದ್ರಾಸ್ ಐಐಟಿ ಸಂಸ್ಥೆಯಲ್ಲಿ ಮಶೀನ್ ಟೂಲ್ ವಲಯದ ಸಂಶೋಧನಾ ಅನ್ವಯಿಕತೆಗೆ ವಿಶೇಷ ಕೇಂದ್ರವಿದೆ. ಇದಕ್ಕೆ ಸರಕಾರವು ಶೇ 80ರಷ್ಟು ಮತ್ತು ಉದ್ಯಮ ವಲಯವು ಮಿಕ್ಕ ಶೇ 20ರಷ್ಟು ವೆಚ್ಚ ಭರಿಸುತ್ತಿವೆ. ಕರ್ನಾಟಕದಲ್ಲೂ ಇಂಥದೊಂದು ಕೇಂದ್ರವನ್ನು ಸ್ಥಾಪಿಸಬೇಕು ಎಂದು ಉದ್ಯಮಿಗಳು ಸಲಹೆ ನೀಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಈ ವಲಯದ ಗಣ್ಯ ಉದ್ಯಮಿಗಳು ಭಾಗವಹಿಸಿದ್ದ ಸಭೆಯಲ್ಲಿ ದೇಶದಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯದ ಮಶೀನ್ ಟೂಲ್ಸ್ ವಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಬಗ್ಗೆ ಸಲಹೆ, ಸೂಚನೆಗಳು ಮೂಡಿಬಂದವು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಷನ್ ಗ್ರೂಪ್ ಉಪಾಧ್ಯಕ್ಷ ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಸದಸ್ಯರಾದ ಟಿಮ್ ಕೆನ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕೌಲ್, ವೈಜಿ-1 ವ್ಯವಸ್ಥಾಪಕ ನಿರ್ದೇಶಕ ಸಾರಂಗ್ ವಿ ಪಾರೀಖ್, ಇಂಡಿಯನ್ ಮಶೀನ್ ಟೂಲ್ಸ್ ಮ್ಯಾನಫ್ಯಾಕ್ಚರರ್ಸ್ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಎಸ್ ರಾಜಮಾನೆ, ಹಿರಿಯ ಸಲಹೆಗಾರ ಸತೀಶಕುಮಾರ್, ಕೆಐಎಡಿಬಿ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net