ಮನೋಲ್ಲಾಸ| ಧೈರ್ಯಂ ಸರ್ವತ್ರ ಸಾಧನಂ

Success
Published on
| ಭಾರತಿ ಎ. ಕೊಪ್ಪ

ಶ್ರೀ ಶಾರದಾದೇವಿಯವರು ಒಮ್ಮೆ ತೌರೂರು ಜಯರಾಮವಟಿಯಿಂದ ದಕ್ಷಿಣೇಶ್ವರಕ್ಕೆ ಹಲವು ಪ್ರಯಾಣಿಕರೊಂದಿಗೆ ಸಾಗುತ್ತಿದ್ದರು. ದಾರಿಯಲ್ಲಿ ಮಧ್ಯೆ ಒಂದು ಕಾಡಿನ ಮೂಲಕ ಹೋಗಬೇಕಾಗಿತ್ತು. ಕಾಡಿನಲ್ಲಿ ಕಳ್ಳಕಾರರ ಭಯವೂ ಇತ್ತು. ಹಾಗಾಗಿ ಸಹವರ್ತಿಗಳು ಕಾಡನ್ನು ಸಂಜೆಯೊಳಗೆ ದಾಟಬೇಕೆಂದು ವೇಗವಾಗಿ ಹೋಗುತ್ತಿದ್ದರು. ಶಾರದಾದೇವಿಯವರಿಗೆ ಅಷ್ಟೊಂದು ವೇಗವಾಗಿ ಹೋಗಲು ಸಾಧ್ಯವಾಗಲಿಲ್ಲ. ತನಗೊಬ್ಬಳಿಗಾಗಿ ಎಲ್ಲರೂ ಏಕೆ ನಿಧಾನವಾಗಿ ಸಾಗಬೇಕು ಎಂದು ಯೋಚಿಸಿ ‘ನೀವು ಮುಂದೆ ಹೋಗಿ, ನಾನು ನಿಧಾನವಾಗಿ ಬಂದು ಸೇರುತ್ತೇನೆ’ ಎಂದರು. ಸಂಜೆಯ ವೇಳೆಗೆ ಶಾರದಾದೇವಿಯವರು ಒಬ್ಬರೇ ಹೋಗುತ್ತಿರುವಾಗ ಹಿಂದಿನಿಂದ ಭಯಾನಕ ಮನುಷ್ಯನೊಬ್ಬ ದೊಣ್ಣೆ ಹಿಡಿದುಕೊಂಡು ಬರುತ್ತಿದ್ದನು. ಅವನನ್ನು ನೋಡಿ ಇವರಿಗೆ ಭಯವಾಯಿತು. ಈ ದಟ್ಟಡವಿಯಲಿ ಕಿರುಚಿದರೂ ಪ್ರಯೋಜನವಿಲ್ಲವೆಂದು ಮನಸ್ಸಿಗೆ ಧೈರ್ಯ ತಂದುಕೊಂಡರು. ‘ಹೋಗುತ್ತಿರುವವರು ಯಾರು?’ ಎಂದು ಆತ ಗರ್ಜಿಸಿದನು.

ಆಗ ಶಾರದಾದೇವಿಯವರು ನಿಂತುಕೊಂಡು, ‘ಅಪ್ಪ ನನ್ನ ಜೊತೆಯವರು ಬಿಟ್ಟುಹೋದರು. ನನಗೆ ದಾರಿ ತಪ್ಪಿದಂತೆ ಕಾಣುತ್ತದೆ. ನಿನ್ನ ಅಳಿಯ ದಕ್ಷಿಣೇಶ್ವರದಲ್ಲಿ ಇರುವರು. ನೀನು ನನ್ನನ್ನು ಹೇಗಾದರೂ ಅಲ್ಲಿಗೆ ಕರೆದುಕೊಂಡು ಹೋಗಿ ಬಿಟ್ಟರೆ, ಅವರು ತುಂಬಾ ಸಂತೋಷಪಡುವರು’ ಎಂದರು. ಅಷ್ಟರಲ್ಲಿ ಒಬ್ಬ ಸ್ತ್ರೀ ಕೂಡ ಬಂದಳು. ಅವಳನ್ನು ನೋಡಿ ಶಾರದಾದೇವಿಯವರಿಗೆ ಇನ್ನಷ್ಟು ಧೈರ್ಯ ಬಂದಿತು. ಅವಳ ಬಳಿ ಹೋಗಿ, ‘ನಾನು ನಿನ್ನ ಮಗಳು ಶಾರದೆ. ಜೊತೆಯಲ್ಲಿ ಇರುವವರು ಎಲ್ಲರೂ ಬಿಟ್ಟು ಹೋಗಿದ್ದರಿಂದ ಕಷ್ಟಕ್ಕೆ ಸಿಲುಕಿದ್ದೇನೆ. ನನ್ನನ್ನು ಕಾಪಾಡಲು ಭಗವಂತನೇ ಈ ತಂದೆಯನ್ನು ಮತ್ತು ನಿನ್ನನ್ನು ಕಳುಹಿಸಿದನು’ ಎಂದರು. ಶಾರದಾದೇವಿಯವರು ಪ್ರೀತಿ ತುಂಬಿದ ಹೃದಯದಿಂದ ‘ತಂದೆತಾಯಿ’ ಎಂದಾಗ ಅವರ ಹೃದಯ ಮುಟ್ಟಿತು. ಮಗಳ ಮೇಲಿರುವಷ್ಟೇ ಪ್ರೀತಿ ಉಕ್ಕಿತು. ಆ ಕಳ್ಳದಂಪತಿ ಶಾರದಾದೇವಿಯವರನ್ನು ಹತ್ತಿರದ ಹಳ್ಳಿಯೊಂದಕ್ಕೆ ಕರೆದುಕೊಂಡು ಹೋಗಿ ತಂಗುವ ವ್ಯವಸ್ಥೆ ಮಾಡಿ ಉಪಚರಿಸಿದರು. ನಂತರ ಹೃದಯತುಂಬಿ ಕಂಬನಿಯೊಂದಿಗೆ ಬೀಳ್ಕೊಟ್ಟರು. ಆ ಪರಿಚಯ ಮುಂದಿನ ದಿನಗಳಲ್ಲಿ ಆ ದಂಪತಿ ಹಲವು ಬಾರಿ ದಕ್ಷಿಣೇಶ್ವರಕ್ಕೆ ಬಂದು ಶಾರದಾದೇವಿ ಮತ್ತು ಪರಮಹಂಸರನ್ನು ಭೇಟಿಯಾಗಲು ಬರುವಂತೆ ಮಾಡಿತು. ಅವರ ಮನದಲ್ಲಿ ಸಾಧು ಸ್ವಭಾವ ಮೂಡುವಂತೆ ಮಾಡಿತು. ನಮ್ಮ ಜೀವನದಲ್ಲಿ ಕೂಡ ಅದೆಷ್ಟೋ ಕಠಿಣ ಪರಿಸ್ಥಿತಿಗಳು ಎದುರಾಗುತ್ತವೆ. ದುಷ್ಟರು, ದುರ್ಗಣರು ನಮ್ಮನ್ನು ಭಯಭೀತರಾಗಿಸಬಹುದು. ಆದರೆ ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ, ಕಠಿಣ ಪರಿಸ್ಥಿತಿಯಲ್ಲೂ ಧೈರ್ಯಗೆಡಬಾರದು. ಅನವಶ್ಯಕ ಗೊಂದಲ ಸೃಷ್ಟಿಸಬಾರದು. ವಿವೇಕ, ತಾಳ್ಮೆಯಿಂದ ಸಮಯೋಚಿತವಾಗಿ ವರ್ತಿಸಬೇಕು. ಪ್ರೀತಿ, ವಿಶ್ವಾಸದ ಮಾತುಗಳಿಗೆ, ಸಮಾಧಾನ ಚಿತ್ತದ ನಡವಳಿಕೆಗೆ ಎಂತಹವರ ಮನಸ್ಸನ್ನು ಕೂಡ ಪರಿವರ್ತನೆ ಮಾಡುವ ಶಕ್ತಿ ಇದೆ. ‘ಮನುಷ್ಯ ವಿನಾಶದ ಅಂಚಿನಲ್ಲಿದ್ದಾಗಲೂ ಬದುಕಿನ ತಂತು ಎಟುಕೀತೇ ಎಂದು ಅರಸಬೇಕು’ ಎಂಬ ಶಿವರಾಮ ಕಾರಂತರ ನುಡಿಯಂತೆ, ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಅದನ್ನು ಧೈರ್ಯದಿಂದ ಎದುರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತ ಬದುಕನ್ನು ಮುನ್ನಡೆಸಬೇಕು.

(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net