ಆರೋಗ್ಯ ಕ್ರಾಂತಿಗೆ ಮಣೂರ ಕಾರ್ಯ

0201 KLB 04
Published on

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತ, ಆರೋಗ್ಯ ಕ್ರಾಂತಿ ಮಾಡುತ್ತಿರುವ ಡಾ.ಫಾರುಖ್ ಅಹ್ಮದ್ ಮಣೂರ ಕಾಯಕ ಜೀವಿಯಾಗಿದ್ದಾರೆ. ಸಾಮಾಜಿಕ ಕಳಕಳೆಯೊಂದಿಗೆ ವೈದ್ಯ ವೃತ್ತಿಯ ಘನತೆ ಎತ್ತಿ ಹಿಡಿದಿದ್ದಾರೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ನಗರದ ರಿಂಗ್ ರಸ್ತೆಯಲ್ಲಿರುವ ಮಣೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಆಸ್ಪತ್ರೆಯ ಮೂರನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಟಿ.ಬಿ.ಮುಕ್ತ ಭಾರತ ನಿರ್ಮಾಣ ಅಭಿಯಾನದ ಭಾಗವಾಗಿ ೫೦೦ ಕ್ಷಯ ಪೀಡಿತರನ್ನು ದತ್ತು ಪಡೆದಿರುವ ಮಣೂರ ಆಸ್ಪತ್ರೆಗೆ ರಾಜ್ಯಪಾಲರು ಸನ್ಮಾನಿಸಿದ್ದಾರೆ. ಈ ಭಾಗದಿಂದ ಸನ್ಮಾನಿತ ಏಕೈಕ ವೈದ್ಯ. ಇದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿ ಎಂದರು.

ಗಂಭೀರ ಅನಾರೋಗ್ಯ ಪ್ರಕರಣದಲ್ಲೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದು, ಬೇಸಿಗೆಯಲ್ಲಿ ಅರವಟಿಗೆ ಅಳವಡಿಕೆ, ಬೀದಿ ಬದಿ ವ್ಯಾಪಾರಿಗಳಿಗೆ ಕೊಡ ನೀಡುವುದು, ಸಂಚಾರ ಪೊಲೀಸರಿಗೆ ಹೆಲ್ಮೆಟ್ ವಿತರಣೆ ಸೇರಿ ಜನಪರ ಕಾರ್ಯ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಬಚಾವೋ ಬೇಟಿ ಪಡಾವೋ ಭಾಗವಾಗಿ ೨೦೦ ಹೆಣ್ಣು ಮಕ್ಕಳಿಗೆ ಯೋಜನೆ ಲಾಭ ತಲುಪಿಸಲು ಶ್ರಮಿಸಿದ್ದಾರೆ ಎಂದರು.

ಮಣೂರ ಆಸ್ಪತ್ರೆ ಮುಖ್ಯಸ್ಥ ಡಾ.ಫಾರುಕ್ ಅಹ್ಮದ್ ಮಣೂರ ಮಾತನಾಡಿ, ಎಲ್ಲ ವರ್ಗದವರಿಗೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ನೀಡಲು, ಮೆಡಿಕಲ್ ಹಬ್ ನಿರ್ಮಿಸುವುದು ನಮ್ಮ ಕನಸಾಗಿದೆ. ಅದಕ್ಕಾಗಿ ಅರ್ಧ ದಾರಿ ಕ್ರಮಿಸಿದ್ದು, ಜನರು ಚಿಕಿತ್ಸೆಗಾಗಿ ಸೊಲ್ಲಾಪುರ, ಹೈದರಾಬಾದ್‌ಗೆ ಹೋಗುವುದು ಕಡಿಮೆ ಆಗಿದೆ. ಎಲ್ಲ ರೀತಿಯ ಆರೋಗ್ಯ ಸೇವೆ ಕೈಗೆಟಕುವ ದರದಲ್ಲಿ ಒದಗಿಸುವುದೇ ನಮ್ಮ ಕನಸು. ಅದಕ್ಕಾಗಿ ಶ್ರಮಿಸಲಾಗುತ್ತಿದೆ ಎಂದರು.

ಸಾಮಾನ್ಯವಾಗಿ ಅತ್ಯಂತ ತುರ್ತು ಚಿಕಿತ್ಸೆ ಕೋರಿ ಬರುವ ವ್ಯಕ್ತಿಗೆ ಸುವರ್ಣ ಸಮಯ (ಗೋಲ್ಡನ್ ಅವರ್)ದಲ್ಲಿಯೇ ಚಿಕಿತ್ಸೆ ನೀಡಬೇಕಾಗುತ್ತದೆ. ಆಗ ಮಾತ್ರ ನೀಡುವ ಚಿಕಿತ್ಸೆಗೆ ಫಲ ದೊರೆಯುತ್ತದೆ. ಮೆಡಿಕಲ್ ಹಬ್ ಕನಸು ಸಾಕಾರವಾದರೆ ಅಮೂಲ್ಯ ಜೀವ ಉಳಿಸುವ ಕನಸಿಗೆ ಬಲ ಬರಲಿದೆ ಎಂದರು.
ಆಸ್ಪತ್ರೆ ವೈದ್ಯರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net