ಆಪರೇಷನ್​ ಸಿಂಧೂರ ಹೆಮ್ಮೆಯ ಸಂಗತಿ! ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ..Mann Ki Baat

Mann Ki Baat
Published on

Mann Ki Baat : ಪಾಕಿಸ್ತಾನದ ವಿರುದ್ಧದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರು ತೋರಿಸಿದ ಶೌರ್ಯ ಇಡೀ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' (ಮೇ 25) ನ 122ನೇ ಸಂಚಿಕೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ವಿರುದ್ಧ ಇಡೀ ದೇಶವು ಒಗ್ಗಟ್ಟಾಗಿದೆ ಮತ್ತು 'ಆಪರೇಷನ್ ಸಿಂಧೂರ' ಸಮಯದಲ್ಲಿ ನಮ್ಮ ಪಡೆಗಳು ತೋರಿಸಿದ ಧೈರ್ಯ ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡಿದೆ ಎಂದರು.

ಆಪರೇಷನ್​ ಸಿಂಧೂರ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಅದು ನಮ್ಮ ದೃಢನಿಶ್ಚಯ, ಧೈರ್ಯ ಮತ್ತು ಪರಿವರ್ತನೆಗೊಳ್ಳುತ್ತಿರುವ ಭಾರತದ ಚಿತ್ರಣವಾಗಿದೆ ಮತ್ತು ಈ ಚಿತ್ರಣವು ಇಡೀ ದೇಶವನ್ನು ದೇಶಭಕ್ತಿಯ ಭಾವನೆಯಿಂದ ತುಂಬಿದೆ ಮತ್ತು ಅದನ್ನು ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಚಿತ್ರಿಸಿದೆ ಎಂದು ಬಣ್ಣಿಸಿದರು. ದೇಶದ ಅನೇಕ ನಗರಗಳು, ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ತಿರಂಗ ಯಾತ್ರೆಗಳನ್ನು ಆಯೋಜಿಸಲಾಗಿತ್ತು. ದೇಶದ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ಸಾವಿರಾರು ಜನರು ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಹೊರಬಂದರು ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಪಂಚದಾದ್ಯಂತ ನಡೆಯುತ್ತಿರುವ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ 'ಆಪರೇಷನ್ ಸಿಂಧೂರ' ಹೊಸ ವಿಶ್ವಾಸ ಮತ್ತು ಉತ್ಸಾಹವನ್ನು ನೀಡಿದೆ. ಆಪರೇಷನ್ ಸಿಂಧೂರ ದೇಶದ ಜನರ ಮೇಲೆ ಎಷ್ಟೊಂದು ಪ್ರಭಾವ ಬೀರಿದೆ ಎಂದರೆ, ಅನೇಕ ಕುಟುಂಬಗಳು ಅದನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡಿವೆ. ಬಿಹಾರದ ಕತಿಹಾರ್, ಉತ್ತರ ಪ್ರದೇಶದ ಕುಶಿನಗರ ಮತ್ತು ಇತರ ಹಲವು ನಗರಗಳಲ್ಲಿ, ಆ ಅವಧಿಯಲ್ಲಿ ಜನಿಸಿದ ಮಕ್ಕಳಿಗೆ 'ಸಿಂಧೂರ್' ಎಂದು ಹೆಸರಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಇದೇ ಸಂದರ್ಭದಲ್ಲಿ ಸೈನಿಕರ ಧೈರ್ಯ, ಕೌಶಲ್ಯ ಮತ್ತು ಸ್ವದೇಶಿ ತಂತ್ರಜ್ಞಾನದ ಬಳಕೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ನಮ್ಮ ಸೈನಿಕರು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದರು. ಅದು ಅವರ ಅದಮ್ಯ ಧೈರ್ಯವಾಗಿತ್ತು. ಅದರ ಜೊತೆಗೆ ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ತಂತ್ರಜ್ಞಾನದ ಶಕ್ತಿಯೂ ಆಗಿತ್ತು ಎಂದರು.

ಆಪರೇಷನ್ ಸಿಂಧೂರ್ ನಂತರ, ಸ್ಥಳೀಯತೆಗೆ ತುಂಬಾ ಒತ್ತು ನೀಡುತ್ತಿರುವುದು ಹಲವರಿಗೆ ಸ್ಫೂರ್ತಿ ನೀಡಿದೆ. ಪೋಷಕರೊಬ್ಬರು, ನಾವು ಈಗ ನಮ್ಮ ಮಕ್ಕಳಿಗಾಗಿ ಭಾರತದಲ್ಲಿ ತಯಾರಿಸಿದ ಆಟಿಕೆಗಳನ್ನು ಮಾತ್ರ ಖರೀದಿಸುತ್ತೇವೆ. ದೇಶಭಕ್ತಿ ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ ಎಂದರು. ಕೆಲವು ಕುಟುಂಬಗಳಂತೂ ತಮ್ಮ ಮುಂದಿನ ರಜಾದಿನವನ್ನು ಭಾರತದಲ್ಲಿ ಕಳೆಯಲು ಪ್ರತಿಜ್ಞೆ ಮಾಡಿವೆ. ಅನೇಕ ಯುವಕರು ಭಾರತದಲ್ಲಿ ಮದುವೆಯಾಗಲು ಪ್ರತಿಜ್ಞೆ ಮಾಡಿದ್ದಾರೆ. ನಾವು ನೀಡುವ ಪ್ರತಿಯೊಂದು ಉಡುಗೊರೆಯನ್ನು ಭಾರತೀಯ ಕುಶಲಕರ್ಮಿಗಳು ತಯಾರಿಸುತ್ತಾರೆ ಎಂದು ಕೆಲವರು ಹೇಳಿದ್ದಾರೆ ಎಂದು ಪ್ರಧಾನಿ ಮೋದಿ ಮನ್​ ಕಿ ಬಾತ್​​ನಲ್ಲಿ ಹಂಚಿಕೊಂಡರು.

ಕೃಷಿಯಲ್ಲಿ ಮಹಿಳೆಯರ ಪಾತ್ರವನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ, ಸ್ವಲ್ಪ ಸಮಯದವರೆಗೆ ಬೇರೆಯವರನ್ನು ಅವಲಂಬಿಸಬೇಕಾಗಿದ್ದ ಮಹಿಳೆಯರು ಇದೀಗ ಡ್ರೋನ್‌ಗಳ ಸಹಾಯದಿಂದ 50 ಎಕರೆ ಭೂಮಿಯಲ್ಲಿ ಕೀಟನಾಶಕಗಳನ್ನು ಸಿಂಪಡಿಸುವ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ. ಗ್ರಾಮಸ್ಥರು ಸಹ ಈ ಬದಲಾವಣೆಯನ್ನು ಪೂರ್ಣ ಹೃದಯದಿಂದ ಒಪ್ಪಿಕೊಂಡಿದ್ದಾರೆ. ಈಗ ಈ ಮಹಿಳೆಯರನ್ನು 'ಡ್ರೋನ್ ಆಪರೇಟರ್‌ಗಳು' ಎಂದು ಕರೆಯಲಾಗುವುದಿಲ್ಲ, ಬದಲಿಗೆ 'ಆಕಾಶ ಯೋಧರು' ಎಂದು ಕರೆಯಲಾಗುತ್ತದೆ ಎಂದರು.

ಉತ್ತರಾಖಂಡದ ಹಲ್​ದ್ವಾನಿಯ 65 ವರ್ಷದ ಜೀವನ್ ಜೋಶಿ ಅವರ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಬಾಲ್ಯದಲ್ಲಿ ಪೋಲಿಯೋ ಅವರ ಕಾಲುಗಳ ಬಲವನ್ನು ಕಸಿದುಕೊಂಡಿತು ಹೊರತು ಅವರ ಧೈರ್ಯವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಜೀವನ್ ಜೋಶಿ ಒಂದು ವಿಶಿಷ್ಟ ಕಲೆಗೆ ಜನ್ಮ ನೀಡಿದರು ಮತ್ತು ಅದಕ್ಕೆ 'ಬ್ಯಾಗೆಟ್' ಎಂದು ಹೆಸರಿಸಿದರು. ಪೈನ್ ಮರಗಳಿಂದ ಬೀಳುವ ಒಣ ತೊಗಟೆಯಿಂದ ಸುಂದರವಾದ ಕಲಾಕೃತಿಗಳನ್ನು ತಯಾರಿಸುತ್ತಾರೆ. ಜನರು ಸಾಮಾನ್ಯವಾಗಿ ನಿಷ್ಪ್ರಯೋಜಕವೆಂದು ಪರಿಗಣಿಸುವ ತೊಗಟೆಯೇ ಜೀವನ್ ಜಿ ಅವರ ಕೈಗೆ ಬಂದ ತಕ್ಷಣ ಪರಂಪರೆಯಾಗುತ್ತದೆ ಎಂದು ಹೊಗಳಿದರು.

ಇತರ ವಿಷಯಗಳ ಜೊತೆಗೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆಯೂ ಪ್ರಧಾನಿ ಮೋದಿಯವರು ಪ್ರೋತ್ಸಾಹದಾಯಕ ಸುದ್ದಿಗಳನ್ನು ಹಂಚಿಕೊಂಡರು. ಕಳೆದ ಐದು ವರ್ಷಗಳಲ್ಲಿ, ಗುಜರಾತ್‌ನ ಗಿರ್‌ನಲ್ಲಿ ಸಿಂಹಗಳ ಸಂಖ್ಯೆ 674 ರಿಂದ 891ಕ್ಕೆ ಏರಿದೆ. ಸಿಂಹ ಗಣತಿಯ ನಂತರ ಹೊರಹೊಮ್ಮಿದ ಸಿಂಹಗಳ ಸಂಖ್ಯೆ ತುಂಬಾ ಪ್ರೋತ್ಸಾಹದಾಯಕವಾಗಿದೆ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net