ಮಂಕುತಿಮ್ಮನ ಕಗ್ಗ ಅನರ್ಘ್ಯ ಕೊಡುಗೆ

ganesh
ಶತಾವಧಾನಿ ಗಣೇಶ್
Published on

ಶಿವಮೊಗ್ಗ: ಕನ್ನಡ ಸಾರಸ್ವತ ಲೋಕಕ್ಕೆ ಡಿವಿಜಿ ನೀಡಿದ (ಡಿ.ವಿ.ಗುಂಡಪ್ಪ) ಅನರ್ಘ್ಯ ಕೊಡುಗೆ ಮಂಕುತಿಮ್ಮನ ಕಗ್ಗ. ಅವರ ಸಾಹಿತ್ಯ ಕೃತಿಗಳು ಹಿಮಾಲಯ ಪರ್ವತಶ್ರೇಣಿಯಂತೆ. ಅವುಗಳ ಪೈಕಿ ಜ್ಞಾಪಕ ಚಿತ್ರಶಾಲೆಯ ಸಂಪುಟಗಳು ಹಲವು ಕಾರಣಗಳಿಂದ ಮಹತ್ವದ್ದೆನಿಸಿದೆ ಎಂದು ಬಹುಶ್ರುತ ವಿದ್ವಾಂಸ, ಶತಾವಧಾನಿ ಆರ್.ಗಣೇಶ್ ಅಭಿಪ್ರಾಯಪಟ್ಟರು.

ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಡಿವಿಜಿ ಅವರ ಜ್ಞಾಪಕ ಚಿತ್ರಶಾಲೆ ಕುರಿತು ಉಪನ್ಯಾಸ ನೀಡಿದ ಅವರು, ಜ್ಞಾಪಕ ಚಿತ್ರಶಾಲೆಯಲ್ಲಿ 180ಕ್ಕೂ ಹೆಚ್ಚು ಮಂದಿಯ ವ್ಯಕ್ತಿತ್ವವನ್ನು ಡಿವಿಜಿ ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ಸಾಹಿತಿಗಳು, ವಿದ್ವಾಂಸರು, ಕಲೋಪಾಸಕರು, ಸಮಾಜದಲ್ಲಿನ ಉನ್ನತ ಸ್ಥರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರ ವಿವರಣೆಗಳಿವೆ ಎಂದರು.

ಜ್ಞಾಪಕ ಚಿತ್ರಶಾಲೆಗೆ ಡಿವಿಜಿ ಬಹಳಷ್ಟು ಸಮಯ ತೆಗೆದುಕೊಂಡರು. ತಮ್ಮ ಪರಿಧಿಯಲ್ಲಿನ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವ ಅರಿತು, ಅದನ್ನು ಮನನ ಮಾಡಿಕೊಂಡು ನೈಜ ಚಿತ್ರಣವನ್ನು ಈ ಸಂಪುಟಗಳಲ್ಲಿ ಚಿತ್ರಿಸಿದ್ದಾರೆ. ವ್ಯಕ್ತಿ ಚಿತ್ರಣ ರಚನೆ ಸಂದರ್ಭದಲ್ಲಿ ಕೆಲವೊಂದು ಅಪಾಯಗಳಿರುತ್ತವೆ. ಅನಗತ್ಯ ವೈಭವೀಕರಣ, ಅತಿ ರಂಜನೀಯ ಹಾಗೂ ರೋಚಕವಾಗಿ ಚಿತ್ರಿಸುವುದು ಇದರಲ್ಲಿ ಸೇರಿದೆ. ಆದರೆ ಜ್ಞಾಪಕ ಚಿತ್ರಶಾಲೆಯಲ್ಲಿ ಈ ಅಪಾಯ ಆಗದಂತೆ ಡಿವಿಜಿ ಎಚ್ಚರಿಕೆ ವಹಿಸಿದ್ದಾರೆ ಎಂದು ಹೇಳಿದರು.

ನಾಡು ಕಂಡ ಮೇಧಾವಿ ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಅವರ ಬಗ್ಗೆ ಬೇರೆ ಯಾವುದೇ ಕೃತಿಯಲ್ಲಿ ಇಲ್ಲದ ಉಲ್ಲೇಖಗಳು ಜ್ಞಾಪಕ ಚಿತ್ರಶಾಲೆಯಲ್ಲಿವೆ. ವ್ಯಕ್ತಿಗಳ ಮನೋಧರ್ಮವನ್ನು ಡಿವಿಜಿ ಉಲ್ಲೇಖಿಸಿದ್ದಾರೆ. ಇದರ ಮೊದಲ ಸಂಪುಟ ಆರಂಭವಾಗುವುದು ಅಧ್ಯಾಪಕರಾದ ಕೆ.ರಾಮಚಂದ್ರ ರಾವ್, ಕೃಷ್ಣಸ್ವಾಮಿ ಅಯ್ಯರ್ ಹಾಗೂ ವಕೀಲ ವರದಾಚಾರ್ ಅವರ ವಿಷಯಗಳಿಂದ ಎಂದು ತಿಳಿಸಿದರು.

ಡಿವಿಜಿ ಅವರ ಆಪ್ತ ವಲಯದಲ್ಲಿ ಖ್ಯಾತನಾಮರಾಗಿದ್ದ ಟಿ.ಎಚ್.ವೆಂಕಣ್ಣಯ್ಯ, ವಿ.ಸೀತಾರಾಮಯ್ಯ, ಮಿರ್ಜಾ ಇಸ್ಮಾಯಿಲ್, ಸರ್ ಎಂ.ವಿಶ್ವೇಶ್ವರಯ್ಯ ಮುಂತಾದವರಿದ್ದರು. ಜ್ಞಾಪಕ ಚಿತ್ರಶಾಲೆಯಲ್ಲಿ ವಿಶೇಷ ಎನಿಸುವ ಸೂಕ್ತಿಗಳಿವೆ, ವಿನೋದ, ಗಂಭೀರ ಬರಹಗಳೂ ಇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net