ಹಿಂದಿಯ ‘ಜಾನೇ ತು ಯಾ ಜಾನೇ ನಾ’ ನಟಿ ಮಂಜರಿ ಫಡ್ನಿಸ್ ಪ್ರಾಣಿ ಪ್ರಿಯೆ. ನಟನೆ ಜತೆಗೆ ಬಿಡುವಿನ ಸಮಯದಲ್ಲಿ ಅವರು ಪ್ರಾಣಿಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಇನ್ನು, ಬೀದಿ ನಾಯಿಗಳೆಂದರೆ ಅವರಿಗೆ ಅಧಿಕ ಪ್ರೀತಿ. ಹಲವು ಬೀದಿನಾಯಿಗಳನ್ನು ದತ್ತು ಪಡೆದು ಅವರು ಸಾಕುತ್ತಿದ್ದಾರೆ. ಹೀಗಿರುವಾಗ, ಮಂಜರಿ ಅಚ್ಚು ಮೆಚ್ಚಿನ ‘ಮೈಕಿ’ ನಾಯಿಯನ್ನು ಯಾರೋ ಕ್ರೂರವಾಗಿ ಹಿಂಸಿಸಿ ಸಾಯಿಸಿದ್ದು, ಅದರಿಂದಾಗಿ ತೀವ್ರ ಆತಂಕಕ್ಕೀಡಾಗಿದ್ದಾರೆ. ಭಾವುಕರಾಗಿ ಬಿಕ್ಕಿ ಚಿಕ್ಕಿ ಅಳುತ್ತಲೇ ಮಾಹಿತಿ ಹಂಚಿಕೊಂಡಿರುವ ಅವರು ಕೊಲೆಗಾರರಿಗೆ ಹಿಡಿಶಾಪ ಹಾಕಿದ್ದಾರೆ. ‘ಮೈಕಿ’ ಕೊಂದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ‘ಕಳೆದ 2019ರಿಂದ ‘ಮೈಕಿ’ ನಮ್ಮ ಹೌಸಿಂಗ್ ಸೊಸೈಟಿಯ ಭಾಗವಾಗಿದ್ದನು. ಆದರೆ, ಇತ್ತೀಚೆಗೆ ಕಾಣೆಯಾಗಿದ್ದ. ಆತಂಕಗೊಂಡು ನಾವು ಹುಡುಕಾಟ ನಡೆಸಿದೆವು. ಕೆಲವೆಡೆ ಪೋಸ್ಟರ್ ಕೂಡ ಅಂಟಿಸಿದ್ದೆವು. ಆದರೆ, ಇದೀಗ ‘ಮೈಕಿ’ಯನ್ನು ಹಿಂಸಿಸಿ ಕೊಲೆ ಮಾಡಲಾಗಿದೆ ಎಂಬ ವಿಷಯ ಗೊತ್ತಾಯಿತು. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಸಲಿದ್ದೇವೆ’ ಎಂದಿರುವ ಮಂಜರಿ, ‘ಮೈಕಿ’ ಕೊಲೆಯಾಗಿರುವ ಬಗ್ಗೆ, ‘ಕಳೆದ ಕೆಲ ದಿನಗಳ ಹಿಂದೆ ನಮ್ಮ ಹೌಸಿಂಗ್ ಸೊಸೈಟಿಯ ನೆಲಮಹಡಿಯಲ್ಲಿ ಮಲಗಿದ್ದಾಗ ಅದಕ್ಕೆ ತಲೆಗೆ ಜೋರಾಗಿ ಹೊಡೆದು, ಮೆಟ್ಟಿಲುಗಳ ಮೇಲೆ ಎಳೆದುಕೊಂಡು ಹೋಗಿ, ಗೋಣಿಚೀಲದಲ್ಲಿ ಕಟ್ಟಿ ಎಸೆದಿದ್ದರು. ಇದೀಗ ನಮಗೆ ದೇಹ ಸಿಕ್ಕಿದೆ’ ಎಂದು ಅಳುತ್ತಾ ಮಾಹಿತಿ ಹಂಚಿಕೊಂಡಿದ್ದಾರೆ. ಬೀದಿ ನಾಯಿಗಳ ರಕ್ಷಣೆಗೆ ಕಾನೂನು ರಚಿಸಬೇಕು ಎಂದು ಸಹ ಮಂಜರಿ ಫಡ್ನಿಸ್ ಆಗ್ರಹಿಸಿದ್ದಾರೆ. -ಏಜೆನ್ಸೀಸ್