

ಬೆಂಗಳೂರು:ಗಾಜು ಮಿಶ್ರಿತ ಮಾಂಜ ದಾರ ಬಳಕೆಗೆ ನಿಷೇಧವಿದ್ದರೂ ಗಾಳಿಪಟ ಹಾರಿಸಲು ಅದನ್ನು ಬಳಸಲಾಗಿದ್ದು, ಇದರಿಂದ ಬೈಕ್‌ನಲ್ಲಿ ಹೋಗುತ್ತಿದ್ದ ವಾಹನ ಸವಾರನ ಕುತ್ತುಗೆಗೆ ಮತ್ತು ಕೈಗೆ ಗಾಯವಾಗಿ ರಕ್ತಸ್ರಾವವಾಗಿದೆ.
ಈ ಸಂಬಂಧ ಗಾಯಗೊಂಡಿರುವ ಬೈಕ್ ಸವಾರ ಎಂ.ಇ.ನಾಸಿಮಿ ಎಂಬಾತ ತಮ್ಮ ಎಕ್ಸ್ ಖಾತೆಯಲ್ಲಿ ೆಟೋ ಸಮೇತ ಪ್ರಕಟಿಸಿ ಅದನ್ನು ಬೆಂಗಳೂರು ನಗರ ಪೊಲೀಸರ ಎಕ್ಸ್ ಖಾತೆಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ನಾನು ಥಣಿಸಂದ್ರದ ಸಿಎಂಎ ಕನ್ವೆಂಷನ್ ಹಾಲ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಮಕ್ಕಳ ಹಾರಿಸಿದ ಗಾಜು ಲೇಪಿತ ಗಾಳಿಪಟದ ದಾರದಿಂದ ನನ್ನ ಕುತ್ತಿಗೆಗೆ ಗಾಯವಾಗಿದೆ. ನಾನು ವಾಹನ ಚಲಾಯಿಸುವಾಗ ಎಲ್ಲ ಸುರಕ್ಷಿತ ಕ್ರಮಗಳನ್ನು ಅನುಸರಿಸಿದ್ದರೂ ದಾರವು ನನ್ನ ಕುತ್ತಿಗೆ ಮತ್ತು ಕೈಗೆ ಗಂಭೀರವಾದ ಗಾಯಗೊಳಿಸಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇಂತಹ ಅಪಾಯಕಾರಿಯಾದ ದಾರವನ್ನು ಜನನಿಬಿಡ ಪ್ರದೇಶದಲ್ಲಿ ಬಳಸುವುದನ್ನು ನಿಷೇಧಿಸಬೇಕು ಎಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಜತೆಗೆ ಪಾಲಕರು ಇಂತಹ ಅಪಾಯಕಾರಿಯಾದ ದಾರವನ್ನು ಬಳಕೆ ಮಾಡದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಗರ ಪೊಲೀಸರು ಸಂಬಂಧಪಟ್ಟ ಅಧಿಕಾರಿಯ ಗಮನಕ್ಕೆ ತಂದು ಕ್ರಮ ಜರುಗಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.