

Manish Tewari : ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ ಕುರಿತ ಚರ್ಚೆಗೆ ಶಶಿ ತರೂರ್ ಜೊತೆಗೆ ತಮ್ಮ ಹೆಸರನ್ನೂ ಕೈಬಿಟ್ಟಿದ್ದಕ್ಕೆ ಸ್ವಪಕ್ಷದ ವಿರುದ್ಧವೇ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ತಿರುಗಿ ಬಿದ್ದಿದ್ದಾರೆ.
ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ಜಾಗತಿಕವಾಗಿ ಮೂಲೆಗುಂಪು ಮಾಡಲು ಆಪರೇಷನ್ ಸಿಂಧೂರ ಬಳಿಕ ವಿವಿಧ ದೇಶಗಳಿಗೆ ಪ್ರಯಾಣಿಸಿದ ಕೇಂದ್ರ ಸರ್ಕಾರದ ಸರ್ವಪಕ್ಷ ನಿಯೋಗಗಳಲ್ಲಿ ತಿವಾರಿ ಮತ್ತು ತರೂರ್ ಇಬ್ಬರೂ ಇದ್ದರು. ಇದೀಗ ಸಂಸತ್ತಿನಲ್ಲಿ ನಿರ್ಣಾಯಕ ಚರ್ಚೆಗೆ ಕಾಂಗ್ರೆಸ್ನ ಈ ಇಬ್ಬರು ವಾಗ್ಮಿಗಳನ್ನು ನೇಮಿಸದೇ ಇರುವುದು ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಘರ್ಷಣೆಯ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.
ಆಪರೇಷನ್ ಸಿಂಧೂರ ವಿಚಾರವಾಗಿ ಸೋಮವಾರ ಆರಂಭವಾದ ಚರ್ಚೆಗೆ ತಮ್ಮನ್ನು ಮತ್ತು ತರೂರ್ ಅವರನ್ನು ಕಡೆಗಣಿಸಲಾಗಿದೆ ಎಂಬ ಸುದ್ದಿ ಮಾಧ್ಯಮ ವರದಿಯ ಸ್ಕ್ರೀನ್‌ಶಾಟ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮನೀಶ್ ತಿವಾರಿ, ಪುರಬ್ ಔರ್ ಪಚ್ಚಿಮ್ (1970) ಚಿತ್ರದ ಪ್ರಸಿದ್ಧ ದೇಶಭಕ್ತಿ ಗೀತೆಯ ಸಾಹಿತ್ಯವನ್ನು ಹಂಚಿಕೊಂಡಿದ್ದಾರೆ.
ಹೈ ಪ್ರೀತ್ ಜಹಾನ್ ಕಿ ರೀತ್ ಸದಾ, ಮೈನ್ ಗೀತ್ ವಹಾನ್ ಕೆ ಗಾತಾ ಹೂಂ, ಭಾರತ್ ಕಾ ರೆಹನೆ ವಾಲಾ ಹೂಂ, ಭಾರತ್ ಕಿ ಬಾತ್ ಸುನಾತಾ ಹೂಂ. ಜೈ ಹಿಂದ್ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಇದರ ಅರ್ಥ ಏನೆಂದರೆ, ನಾನು ಆ ಸ್ಥಳದ ಪದ್ಧತಿಗಳನ್ನು ಪ್ರೀತಿಸುತ್ತೇನೆ, ನಾನು ಆ ಸ್ಥಳದ ಹಾಡುಗಳನ್ನು ಹಾಡುತ್ತೇನೆ, ನಾನು ಭಾರತದ ನಿವಾಸಿ, ನಾನು ಭಾರತದ ಕಥೆಗಳನ್ನು ಹೇಳುತ್ತೇನೆ ಎಂಬುದು. ಈ ಸಾಹಿತ್ಯದ ಮೂಲಕ ಕಾಂಗ್ರೆಸ್ ಸಂಸದರು ಪರೋಕ್ಷವಾಗಿ ತಮ್ಮ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮೂಲಗಳು ತಿಳಿಸುವಂತೆ ತಿವಾರಿ ಅವರು ಆಪರೇಷನ್ ಸಿಂಧೂರ ಕುರಿತ ಚರ್ಚೆಯಲ್ಲಿ ಭಾಗವಹಿಸಲು ಬಯಸಿದ್ದರು ಮತ್ತು ಮಾತನಾಡುವ ಇಚ್ಛೆಯನ್ನು ವ್ಯಕ್ತಪಡಿಸಿ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕಚೇರಿಗೆ ಮೇಲ್ ಕೂಡ ಮಾಡಿದ್ದರು. ಆದರೆ, ಕಾಂಗ್ರೆಸ್ ಅವರನ್ನು ಪಟ್ಟಿಯಲ್ಲಿ ಸೇರಿಸದಿರಲು ನಿರ್ಧರಿಸಿತು. ನಿಯೋಗದ ಭಾಗವಾಗಿದ್ದ ಕಾಂಗ್ರೆಸ್ ಸಂಸದ ಅಮರ್ ಸಿಂಗ್ ಅವರನ್ನು ಕೂಡ ಚರ್ಚೆಯಲ್ಲಿ ಮಾತನಾಡಲು ಕಾಂಗ್ರೆಸ್ ಆಯ್ಕೆ ಮಾಡಲಿಲ್ಲ.
ಅಂದಹಾಗೆ, ಚರ್ಚೆಯ ಸಮಯದಲ್ಲಿ ಮಾತನಾಡಲು ಸ್ವತಃ ಕಾಂಗ್ರೆಸ್ ಪಕ್ಷವೇ ತರೂರ್ ಅವರನ್ನು ಸಂಪರ್ಕಿಸಿತ್ತು. ಆದಾಗ್ಯೂ, ತರೂರ್ ಅವರು ಆ ಆಹ್ವಾನವನ್ನು ನಿರಾಕರಿಸಿದರು. ಆಪರೇಷನ್ ಸಿಂಧೂರ ಬಗ್ಗೆ ಪಕ್ಷದ ಟೀಕೆಗೆ ಬದ್ಧರಾಗಲು ನನ್ನಿಂದ ಸಾಧ್ಯವಿಲ್ಲ ಎಂದು ತರೂರ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಸಂಸತ್ತಿನಲ್ಲಿ ಮಾತನಾಡುತ್ತೀರಾ ಎಂದು ವರದಿಗಾರರು ಕೇಳಿದಾಗ ತರೂರ್ ಅವರು ತಮ್ಮ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ತಾವು ಮೌನ ವ್ರತ (ಮೌನ ಪ್ರತಿಜ್ಞೆ) ಮಾಡುತ್ತಿದ್ದೇನೆ ಎನ್ನುವ ಮೂಲಕ ವ್ಯಂಗ್ಯವಾಡಿದರು. (ಏಜೆನ್ಸೀಸ್)