ಗಣರಾಜೋತ್ಸವಕ್ಕೆ ಸಜ್ಜಾದ ಮಾಣಿಕ್ ಷಾ ಪರೇಡ್ ಮೈದಾನ

manik shah
Published on

ಬೆಂಗಳೂರು: ಗಣರಾಜೋತ್ಸವ ಕಾರ್ಯಕ್ರಮಕ್ಕೆ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಶುಕ್ರವಾರ ಮೈದಾನದಲ್ಲಿ ಗಣರಾಜ್ಯೋತ್ಸವದ ಆಚರಣೆಯ ಅಂತಿಮ ಹಂತದ ತಾಲೀಮು ಪರಿಶೀಲಿಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಸಿದ್ದತೆ ಮತ್ತು ಭದ್ರತೆ ಬಗ್ಗೆ ಮಾಹಿತಿ ನೀಡಿದರು.

ತುಷಾರ್ ಗಿರಿನಾಥ್ ಮಾತನಾಡಿ, ರಾಜ್ಯಮಟ್ಟದ ೭೬ನೇ ಗಣರಾಜ್ಯೋತ್ಸವಕ್ಕೆ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಬರೋಬ್ಬರಿ ೮ ಸಾವಿರ ಮಂದಿ ಆಸನದ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ ೯ಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ರಾಜ್ಯದ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ. ಬಳಿಕ ೩೮ ತುಕಡಿಗಳಿಂದ ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು.

ಕವಾಯತಿನಲ್ಲಿ ಪೊಲೀಸ್ ತಂಡ, ಕೆಎಸ್‌ಆರ್‌ಪಿ, ಕೇರಳ ಪೊಲೀಸ್ ತಂಡ, ಸ್ಕೌಟ್ಸ್ ಅಂಡ್ ಗೈಡ್ಸ್, ಸೇವಾದಳ ಸೇರಿದಂತೆ ೩೮ ತುಕಡಿಗಳು ಪಾಲ್ಗೊಳ್ಳಲಿವೆ. ಶಾಲಾ ಮಕ್ಕಳಿಂದ ಎರಡು ಸಾಂಸ್ಕೃತಿ ಕಾರ್ಯಕ್ರಮ, ಪೊಲೀಸ್ ಇಲಾಖೆಯಿಂದ ಎರಡು ಹಾಗೂ ಸೇನಾ ಇಲಾಖೆಯಿಂದ ಮೂರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಳೆದ ಮೂರು ದಿನದಿಂದ ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ೬೫೦ ವಿದ್ಯಾರ್ಥಿಗಳು ‘‘ಅರಿವೇ ಅಂಬೇಡ್ಕರ್’ ಹಾಡಿಗೆ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಅಗರ ಕರ್ನಾಟಕ ಪಬ್ಲಿಕ್ ಶಾಲೆಯ ಒಟ್ಟು ೮೦೦ ವಿದ್ಯಾರ್ಥಿಗಳು ‘‘ನಾವೆಲ್ಲರೂ ಒಂದೇ ನಾವು ಭಾರತೀಯರು’ ಹಾಡಿಗೆ ನೃತ್ಯ ಪ್ರದರ್ಶನ ತಾಲೀಮು ನಡೆಸಿದ್ದಾರೆ ಎಂದರು.

ಗೂರ್ಖಾ ರೈಫಲ್ಸ್ ತಂಡದಿಂದ ಖುಕ್ರಿ ನೃತ್ಯ ಹಾಗೂ ಪಂಜಾಬ್‌ನ ಸೈನಿಕರಿಂದ ಭಾಂಗ್ರಾ ಪಂಜಾಬಿ ಜಾನಪದ ನೃತ್ಯ ಮತ್ತು ಗ್ಯಾಟ್ಕಾ ಟೀಮ್ ಪ್ರದರ್ಶನವಿರಲಿದೆ. ಮೈಸೂರಿನ ಕೆಎಸ್‌ಆರ್‌ಪಿ ಮೌಂಟೆಡ್ ಪೊಲೀಸ್ ತಂಡ ‘‘ಟೆಂಟ್ ಪೆಗ್ಗಿಂಗ್’ ಪ್ರದರ್ಶಿಸಲಿದೆ ಎಂದರು.

೮ ಸಾವಿರ ಆಸನಗಳ ವ್ಯವಸ್ಥೆ:

ಗಣರಾಜೋತ್ಸವ ಕಾರ್ಯಕ್ರಮ ವೀಕ್ಷಿಸಲು ಬರುವ ಅತಿ ಗಣ್ಯರಿಗೆ ಸೇರಿದಂತೆ ಸಾರ್ವಜನಿಕರಿಗೆ ಒಟ್ಟು ೬,೫೦೦ ಪಾಸ್ ವಿತರಣೆ ಮಾಡಲಾಗಿದೆ. ಒಂದು ಪಾಸ್‌ನಲ್ಲಿ ಇಬ್ಬರಿಗೆ ಪ್ರವೇಶ ಇರಲಿದ್ದು, ಒಟ್ಟು ೮ ಸಾವಿರ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿ-೨ ಪ್ರವೇಶ ದ್ವಾರದಲ್ಲಿ ಗಣ್ಯ ವ್ಯಕ್ತಿಗಳಿಗೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗಾಗಿ ೧೫೦೦ ಆಸನ ಕಲ್ಪಿಸಲಾಗಿದೆ. ಜಿ-೪ ಪ್ರವೇಶ ದ್ವಾರದಲ್ಲಿ ಇತರೆ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಗಳಿಗೆ ೨ ಸಾವಿರ ಆಸನ ಮೀಸಲಿಡಲಾಗಿದೆ. ಜಿ-೫ ಪ್ರವೇಶದ್ವಾರದಲ್ಲಿ ಸಾರ್ವಜನಿಕರಿಗಾಗಿ ೩ ಸಾವಿರ ಆಸನಗಳನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವವರು ಪ್ರವೇಶ ದ್ವಾರದಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಕಡ್ಡಾಯವಾಗಿ ಅರ್ಹ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.

೧೧೦೦ ಕ್ಕೂ ಹೆಚ್ಚು ಪೊಲೀಸರ ನಿಯೋಜನೆ:

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ನಗರದ ೮ ಡಿಸಿಪಿಗಳು, ೧೭ ಎಸಿಪಿಗಳು, ೪೪ ಇನ್‌ಸ್ಪೆಕ್ಟರ್‌ಗಳು, ೧೧೪ ಎಸ್‌ಐಗಳು, ೫೮ ಎಎಸ್‌ಐಗಳು, ೫೫೧ ಪಿಸಿಗಳು, ೮೦ ಮಹಿಳಾ ಸಿಬ್ಬಂದಿ ಸೇರಿದಂತೆ ಸಾದಾ ಉಡುಪಿನ-೧೪೯ ಅಧಿಕಾರಿ ಮತ್ತು ಸಿಬ್ಬಂದಿ ಮತ್ತು ೩೦ ಜನ ಕ್ಯಾಮೆರಾ ಸಿಬ್ಬಂದಿ ಸೇರಿ ಒಟ್ಟು ೧೦೫೧ ಜನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ. ಇದಲ್ಲದೇ ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ ೧೦ ಕೆಎಸ್‌ಆರ್‌ಪಿ ಮತ್ತು ಸಿಎಆರ್ ತುಕಡಿಗಳು, ಎರಡು ಅಗ್ನಿಶಾಮಕ ವಾಹನಗಳು, ಎರಡು ಆಂಬ್ಯುಲೆನ್ಸ್ , ೪ ಖಾಲಿ ವಾಹನಗಳು, ಒಂದು ಕ್ಷಿಪ್ರ ಕಾರ್ಯಾಚರಣೆ ಪಡೆ, ಒಂದು ಡಿ-ಸ್ವಾಟ್ ಹಾಗೂ ಒಂದು ಐಆರ್‌ವಿಗಳನ್ನು ನಿಯೋಜಿಸಲಾಗಿರುತ್ತದೆ ಗರುಡ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿರುವಂತೆ ನೋಡಿಕೊಳಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net