ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್​ರ​ ಗಾನ ಬಜಾನಕ್ಕೆ ಮನಸೋತ ತುಮಕೂರು ಮಂದಿ!

ips shashikumar
Published on

ತುಮಕೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್​.ಶಶಿಕುಮಾರ್ ಅವರು ಬರೀ ಕರ್ತವ್ಯ ನಿಷ್ಠೆಯಿಂದ ಮಾತ್ರವಲ್ಲ, ಅವರ ಹವ್ಯಾಸದಿಂದಲೂ ಜನರ ಗಮನ ಸೆಳೆಯುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ಕೋತಿರಾಜ್ ಥರಾ ಸರಸರನೆ ಚಿತ್ರದುರ್ಗ ಕೋಟೆಯ ಕಲ್ಲಿನ ಗೋಡೆಯನ್ನು ಐಪಿಎಸ್​ ಅಧಿಕಾರಿ ಶಶಿಕುಮಾರ್​ ಹತ್ತಿದ್ದರು. ಈ ವಿಡಿಯೋ ಸಖತ್​ ವೈರಲ್​ ಆಗಿತ್ತು. ಇದೀಗ ತುಮಕೂರಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹಾಡು ಹೇಳಿ ಜನರನ್ನು ರಂಜಿಸಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರ್​ರಿಂದ ತುಮಕೂರಲ್ಲಿ ನಡೆದ ಗಾನ ಬಜಾನ ಮಾಡಿದ ದೃಶ್ಯವೂ ವೈರಲ್​ ಆಗುತ್ತಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ನಿನ್ನೆ(ಶುಕ್ರವಾರ) ಹೋಗುತಿದ್ದ ಶಶಿಕುಮಾರ್, ದಾರಿ ಮಧ್ಯೆ ತುಮಕೂರು ನಗರದ ಹನುಮಂತಪುರದಲ್ಲಿರುವ ಕೊಲ್ಲಾಪುರದಮ್ಮ ದೇವಸ್ಥಾನದ ದೀಪಾಲಂಕಾರ, ಲಕ್ಷ ದೀಪೋತ್ಸವ ಕಂಡು ಮನಸೋತು ಧಿಡೀರ್ ಭೇಟಿಕೊಟ್ಟರು. ಕಾರ್ಯಕ್ರಮದ ವೇದಿಕೆಯಲ್ಲಿ ಪುನೀತ್​ ರಾಜ್​ಕುಮಾರ್ ಅವರ ಗೊಂಬೆ ಹೇಳುತೈತೆ.. ಹಾಡು, ಶಿವರಾಜ್​ಕುಮಾರ್​ ಅಭಿನಯದ 'ಟಗರು ಬಂತು ಟಗರು' ಹಾಡು ಹಾಡಿ ರಂಜಿಸಿದರು.

ಪೊಲೀಸ್​ ಕಮಿಷನರ್​ರ ಹಾಡಿಗೆ ಮನಸೋತ ಜನರು ಚಪ್ಪಾಳೆಯ ಸುರಿಮಳೆಗೈದರು. ಯುವಕರು ಶಿಳ್ಳೆ ಹಾಕಿ ಸಂಭ್ರಮಿಸಿದರು. ಇನ್ನು ಜನರ ಜತೆ ಸರತಿಯಲ್ಲಿ ಹೋಗಿ ಪ್ರಸಾದ ಸ್ವೀಕರಿಸಿದ ಶಶಿಕುಮಾರ್​, ಜನರೊಂದಿಗೇ ಕುಳಿತು ತಿನ್ನುತ್ತಾ ಸರಳತೆ ಮೆರೆದರು. ಐಪಿಎಸ್​ ಅಧಿಕಾರಿ ಶಶಿಕುಮಾರ್ ಅವರು ಚಿತ್ರದುರ್ಗ ಜಿಲ್ಲೆ ಮೂಲದವರು. ಪ್ರಸ್ತುತ ಮಂಗಳೂರು ಪೊಲೀಸ್ ಕಮೀಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net