ಸಂಸ್ಕಾರ ಭಾರತೀ ವತಿಯಿಂದ ದೀಪಾವಳಿ ಕುಟುಂಬ ಮಿಲನ

Published on

ಮಂಗಳೂರು: ಇಲ್ಲಿನ ಸಂಸ್ಕಾರ ಭಾರತೀ ವತಿಯಿಂದ ಕುಲಶೇಖರ ಜ್ಯೋತಿ ನಗರದ ಶ್ರೀ ಧರ್ಮಶಾಸ್ತ ಮಂದಿರ ಟ್ರಸ್ಟ್ ಸಹಯೋಗದಲ್ಲಿ ಜ್ಯೋತಿ ನಗರದ ಶ್ರೀ ಧರ್ಮಶಾಸ್ತ ಮಂದಿರದ ಆವರಣದಲ್ಲಿ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ ಜರಗಿತು.

ಅತಿಥಿಯಾಗಿ ಪಾಲ್ಗೊಂಡು ಪ್ರಧಾನ ಉಪನ್ಯಾಸ ನೀಡಿದ ಯುವ ಸಾಹಿತಿ ಭರತೇಶ್ ಶೆಟ್ಟಿ ಎಕ್ಕಾರ್ ಅವರು ಮಾತನಾಡಿ, ನಮ್ಮ ಹಿರಿಯರ ವಿಚಾರಧಾರೆ ಎಂದಿಗೂ ಅನುಕರಣೀಯವಾಗಿದೆ. ಋಣತ್ರಯಗಳಾದ ದೇವಋಣ, ಋಷಿಋಣ ಹಾಗೂ ಪಿತೃ ಋಣವನ್ನು ಯಾರಿಗೂ ತೀರಿಸಲು ಸಾಧ್ಯವಿಲ್ಲ ಎನ್ನುವುದು ಸಾರ್ವಕಾಲಿಕ ಸತ್ಯವಾಗಿದೆ. ನಮ್ಮ ಹಿರಿಯರು ಪ್ರಕೃತಿ ಆರಾಧಕರಾಗಿದ್ದರು. ಆದರೆ, ಪ್ರಸ್ತುತ ಹಣವೇ ಜೀವನವಾಗಿರುವುದು ದುರಂತವಾಗಿದೆ ಎಂದರು.

ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಅವರು ಮಾತನಾಡಿ, ಸಂಘ ಪರಿವಾರದ ಉದಾತ್ತ ಪರಿಕಲ್ಪನೆಯಾದ ಪಂಚ ಸಂಸ್ಕಾರದ ಆಶಯಗಳಿಗೆ ಸಂಸ್ಕಾರ ಭಾರತೀ ಸಂಘಟನೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಶ್ರೀ ಧರ್ಮಶಾಸ್ತ ಮಂದಿರದ ಆಡಳಿತ ಟ್ರಸ್ಟಿ ರಾಮಪ್ರಸಾದ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತೊಕ್ಕೊಟ್ಟಿನ ಅಂಬಾವನ ಧರ್ಮ ಶಿಕ್ಷಣ ಕೇಂದ್ರ, ವಿಶ್ವ ಹಿಂದೂ ಪರಿಷತ್ ದೇರೆಬೈಲ್ ಕೊಂಚಾಡಿ ಖಂಡ ಸಮಿತಿ, ವಿಶ್ವ ಹಿಂದೂ ಪರಿಷತ್ ಭಜರಂಗ ದಳ, ಕೊಟ್ಟಾರ ಖಂಡ ಸಮಿತಿ ಹಾಗೂ ಬೋಳೂರಿನ ಅಕ್ಷಯ ಧರ್ಮ ಶಿಕ್ಷಣ ಕೇಂದ್ರ ಕ್ಕೆ ಸಂಸ್ಕಾರ ಭಾರತೀ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಂಗಳೂರಿನ ಸಂಸ್ಕಾರ ಭಾರತೀ ಇದರ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಯಾನಂದ ಕತ್ತಲ್ ಸಾರ್ ನೇತೃತ್ವದಲ್ಲಿ ತುಳುವಾಲ ಬಲಿಯೇಂದ್ರೆ ಯಕ್ಷಗಾನ ತಾಳಮದ್ದಳೆ ಜರಗಿತು. ಬಾಲಕೃಷ್ಣ ಕತ್ತಲ್ ಸಾರ್ ಅವರು ಬಲೀಂದ್ರೆ ಲೆಪ್ಪು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net