

ಮಂಗಳೂರು: ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ, ಮುಲ್ಲಕಾಡು ಫ್ರೆಂಡ್ಸ್ ಕ್ಲಬ್ ಇದರ ಜಂಟಿ ಆಶ್ರಯದಲ್ಲಿ ಆಟಿದ ತಿರ್ಲ್-2024 ಕಾರ್ಯಕ್ರಮ ನಗರದ ಮುಲ್ಲಕಾಡು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಶಿಕ್ಷಣ ತಜ್ಞೆ ಗಿರಿಜಾತೆ ಆರ್ ಭಂಡಾರಿ ಕಾವೂರು ಗುತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳುವರ ಬದುಕು ಹೇಗಿತ್ತು ಎಂಬುದನ್ನು ಆಟಿ ತಿಂಗಳನ್ನು ನೋಡಿದರೆ ಸಾಕು. ಈ ತಿಂಗಳಿನಲ್ಲಿ ವಿಜ್ಞಾನ, ಗೃಹವಿಜ್ಞಾನ, ನಾಟಿ ವೈದ್ಯ, ಅರ್ಥಶಾಸ್ತ್ರದ ಅರಿವು ಒಂದೇ ತಿಂಗಳಲ್ಲಿ ಆಗುತ್ತದೆ ಎಂದರು
ತುಳುವೆರ್ ಕುಡ್ಲದ ಸಂಸ್ಥಾಪಕ ಅಧ್ಯಕ್ಷರಾದ ಪ್ರತಿಕ್ ಯು ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ತುಳು ಸಾಹಿತಿ ಗೀತಾ ಲಕ್ಷ್ಮೀಶ್ ಮಾತನಾಡಿ, ಆಟಿ ಅಮಾವಾಸ್ಯೆಯಂದು ಹಾಲೆಮರದ ತೊಗಡೆಯ ಕಷಾಯದಲ್ಲಿ ವಿಶೇಷ ಮದ್ದಿನ ಸತ್ವವಿದೆಯೆಂದು ಅಂದು ಹಿರಿಯರು ಕಂಡುಕೊಂಡಿದ್ದರು. ಆದರೆ ಇಂದು ಅದು ಸಂಶೋಧನೆ ಮೂಲಕ ದೃಢವಾಗುತ್ತಿದೆ. ಮದುವೆಯಾದ ಹೊಸದರಲ್ಲಿ ಮದುಮಗಳು ಪತಿಯೊಂದಿಗೆ ಇರದೆ, ತವರು ಮನೆಗೆ ಹೋಗಬೇಕು ಅನ್ನುವ ಹಿಂದೆಯೂ ವೈಜ್ಞಾನಿಕ ಕಾರಣಗಳು ಅಡಕವಾಗಿದೆ. ಆಟಿ ಕಳಂಜನ ಹಿಂದೆ ಸಾಮಾಜಿಕ ನ್ಯಾಯ ಮತ್ತು ಬದ್ಧತೆಯನ್ನು ಕಾಣಬಹುದು. ಆಟಿಯ ತಿನಿಸುಗಳಲ್ಲಿ, ಆಚರಣೆಗಳಲ್ಲಿ ಬಡವ - ಬಲ್ಲಿದನೆಂಬ ಭೇದವಿಲ್ಲದೆ ಪ್ರಕೃತಿ ಆರಾಧನೆಯ ಒಟ್ಟಂದವನ್ನು ಕಾಣಬಹುದು ಎಂದರು.
ಮ.ನ.ಪಾ ಮಾಜಿ ಸದಸ್ಯ ದೀಪಕ್ ಪೂಜಾರಿ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ಶ್ರೀನಿವಾಸ ದುಗ್ಗಣಬೆಟ್ಟು, ಶಿಶು ಅಭಿವೃದ್ಧಿ ಯೋಜನೆಯ ನಿವೃತ್ತ ಅಧಿಕಾರಿ ಪ್ರಮೀಳಾ, ಮುಲ್ಲಕಾಡು ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ರಾಮ ಶೆಟ್ಟಿಗಾರ್ ಮುಖ್ಯ ಅತಿಥಿ ಗಳಾಗಿದ್ದರು.
ರಿಷಿ ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀಧರ ಮಣಿಯಾಣಿ, ಸಂಸ್ಥಾಪಕ ದಿವಾಕರ್ ಪದ್ಮುಂಜ, ಕಾರ್ಯದರ್ಶಿ ಕೀರ್ತನ ಕುಲಾಲ್, ಮುಲ್ಲಕಾಡು ಫ್ರೆಂಡ್ ಸರ್ಕಲ್ ನ ಪದಾಧಿಕಾರಿಗಳಾದ ಗಣೇಶ್ ಆಳ್ವ, ಪ್ರಸಾದ್ ದೇವಾಡಿಗ, ರಿಷಿಕಲಾ ಕೇಂದ್ರದ ಪೋಷಕರು, ಶ್ರೀ ದುರ್ಗಾ ಸ್ತ್ರೀಶಕ್ತಿ ಗುಂಪಿನ ಸದಸ್ಯರು, ವೈಷ್ಣವಿ ರೋಜ್ಗಾರ್ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಗೀತಾ ಲಕ್ಷ್ಮೀಶ್ ಇವರನ್ನು ಸನ್ಮಾನಿಸಲಾಯಿತು. ರಿಷಿ ಕಲಾ ಕೇಂದ್ರದ ಕಾರ್ಯದರ್ಶಿ ನಯನ ಸ್ವಾಗತಿಸಿದರು. ಸುಜಿತ್ ದೇವಾಡಿಗ ವಂದಿಸಿದರು. ದೇವಿಕಾ ಸುಳ್ಯ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಿಷಿ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಕಲಾ ಕೇಂದ್ರದ ಸದಸ್ಯರು ಮತ್ತು ಸ್ವ ಸಹಾಯ ಗುಂಪುಗಳ ಸದಸ್ಯರು ಮನೆಯಲ್ಲಿ ತಾವೇ ತಯಾರಿಸಿದ ಸುಮಾರು 30ಕ್ಕೂ ಅಧಿಕ ಬಗೆಯ ಆಟಿಯ ಖಾದ್ಯಗಳನ್ನು ತಯಾರಿಸಿ ಉಣಬಡಿಸಿದರು.